ಬೆಳಗಾವಿ : ದೇವರ ಶಾಪಕ್ಕೆ ಗುರಿಯಾಗಿ ಹುಟ್ಟಿನಿಂದ ಅಂಧತ್ವದಲ್ಲೇ ಬದುಕು ಕಳೆಯುತ್ತಿದ್ದ ಅಂಧರಿಬ್ಬರು ಕೊರೊನಾ ನಿಯಮಾವಳಿಯಂತೆ ಸರಳ ಮದುವೆ ಮಾಡಿಕೊಂಡರು.
ಇಲ್ಲಿನ ಹನುಮಾನ ನಗರದ ಭಕ್ತಿವಾಸ ಸಾಂಸ್ಕೃತಿಕ ಭವನದ ಕಾರ್ಯಾಲಯದಲ್ಲಿ ಉಷಾ ತಾಯಿ ಪೋತದಾರ್ ಫೌಂಡೇಶನ್‍ನ ಆಶ್ರಯದಲ್ಲಿ ಬೆಳಗಾವಿಯ ದೀಪಾ ಹಾಗೂ ಬೆಂಗಳೂರಿನ ರವಿ ಅಂಧ ಜೋಡಿಯ ಮಂಗಲ ಕಾರ್ಯ ನೆರವೇರಿತು.
ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬೆಳಗಾವಿಯ ಉಷಾ ಪೋತದಾರ್ ಫೌಂಡೇಶನ್ ಮುಖ್ಯಸ್ಥರು ಅಂಧ ಜೋಡಿಯ ಮದುವೆ ಮಾಡುವ ಮೂಲಕ ಬಾಳು ಬೆಳಗಿಸುವ ಮಹತ್ವದ ಕಾರ್ಯವನ್ನು ಮಾಡಿದ್ದಾರೆ.
ಮೂಲತಃ ಬೆಂಗಳೂರಿನರಾದ ರವಿ ಪದವಿ ಶಿಕ್ಷಣ ಪೂರೈಸಿ ಸದ್ಯ ಅಂಚೆ ಇಲಾಖೆಯಲ್ಲಿ ಸರ್ಕಾರಿ ಸೇವೆಯಲ್ಲಿದ್ದಾರೆ. ಇತ್ತ ವದು ಕೂಡ ಸಮರ್ಥನಂ ಅಂಧ ವಿಕಲಚೇತನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ದೀಪಾ ಕೂಡ ಬೆಳಗಾವಿಯಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಸಮಾಜದಲ್ಲಿ ಸರಿಸಮನಾಗಿ ಯಾರಿಗೂ ಕಡಿಮೆ ಇಲ್ಲವೆಂಬಂತೆ ಈ ಅಂಧ ಜೋಡಿಗಳ ಜೀವನ ಸಾಗಲಿ. ಇಡೀ ಜೀವನ ಸುಖ,ಶಾಂತಿ ನೆಮ್ಮದಿಯಿಂದ ಕಳೆಯುವಂತಾಗಲಿ ಎಂದು ಮದುವೆಗೆ ಬಂದವರು ನವದಂಪತಿಗಳಿಗೆ ಆಶೀರ್ವಾದ ಮಾಡಿದರು.
ಉಷಾತಾಯಿ ಪೋತದಾರ್ ಫೌಂಡೇಶನ್‍ನ ಮುಖ್ಯಸ್ಥ ಅನಿಲ ಪೋತದಾರ್ ಮಾತನಾಡಿ, ಕಳೆದ ಅನೇಕ ವರ್ಷದಿಂದ ಸ್ಫೂರ್ತಿ ಅಸೋಸಿಯೇಶನ್ ವತಿಯಿಂದ ಅಂಧರ ಮದುವೆ ಮಾಡುತ್ತಿದ್ದು ಇದು 25ನೇ ಮದುವೆ ಆಗಿದೆ. ಅಂಧರು ಮದುವೆಯಾಗದೇ ಉಳಿಯಬಾರದು. ಅವರು ಸ್ವಾವಲಂಬಿ ಜೀವನ ನಿರ್ವಹಿಸಬೇಕು ಎಂಬ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಈ ಸಮಾಜ ಸೇವೆ ಖುಷಿ ನೀಡುವಂಥದು. ಪ್ರತಿವರ್ಷ ಅದ್ಧೂರಿಯಿಂದ ಮದುವೆ ಮಾಡುತ್ತಿದ್ದೇವು. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲಿಸಿ ಮದುವೆ ಮಾಡಿದ್ದೇವೆ ಎಂದರು.