Breaking News

Belagavi:ಅಪಪ್ರಚಾರ ಮಾಡಿದವರಿಗೆ ನೋಟಿಸ್

Spread the love

ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಹೊಸ ಆಡಳಿತ ಮಂಡಳಿಯ ಮೂರು ತಿಂಗಳ ಅವಧಿಯಲ್ಲಿ 500 ಕೋಟಿ ರೂ. ಠೇವಣಿ  ಹೆಚ್ಚಳವಾಗಿದೆ. ಆದರೆ, ಬ್ಯಾಂಕಿನ ವಹಿವಾಟು ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಡಾ.ಮಹಾಂತೇಶ ಕಡಾಡಿ ಸೇರಿ ನಾಲ್ವರಿಗೆ ಕಾನೂನು ನೋಟಿಸ್ ನೀಡಲಾಗಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಠೇವಣಿ ಕಡಿಮೆಯಾಗಿಲ್ಲ. ನಬಾರ್ಡ್ ನಿಯಮಗಳನ್ವಯ ರೈತರಿಗೆ, ಕೈಗಾರಿಕೆ, ಕೃಷಿಯೇತರ ಸಾಲ ಸೌಲಭ್ಯ ಕಲ್ಪಿಸಲಾಗಿದೆ.  ಆರ್ಥಿಕ ವರ್ಷ ಮಾರ್ಚ್ ಅಂತ್ಯದೊಳಗೆ ಎಲ್ಲರೂ ಬಡ್ಡಿ ಸಮೇತ ಸಾಲದ ಕಂತು ಪಾವತಿಸಿಕೊಂಡು ಬರುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರದಿಂದ ಬರಬೇಕಿದ್ದ 160 ಕೋಟಿ ರೂ. ಅನುದಾನ ಬಿಡುಗಡೆಯಾಗಿಲ್ಲ.
 ಆದರೂ ಠೇವಣಿ ಆಧಾರದ ಮೇಲೆ ಕೃಷಿಯೇತರ ಚಟುವಟಿಕೆ ಸಾಲ ಸೌಲಭ್ಯ ಹೆಚ್ಚಿಸಲಾಗುತ್ತಿದೆ ಎಂದರು. ಜಿಲ್ಲೆಯ 4 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3,710 ಕೋಟಿ ರೂ. ಸಾಲ ನೀಡಲಾಗಿದೆ. 2026-27ನೇ ಸಾಲಿನಲ್ಲಿ ಹೊಸ ಕೃಷಿ ಸಾಲ ನೀಡಲಾಗುವುದು.
ನಬಾರ್ಡ್ ನಿಯಮದಂತೆ ಪ್ರತಿ ಎಕರೆಗೆ 40 ಸಾವಿರ ರೂ. ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಇದನ್ನು 1.50 ಲಕ್ಷ ರೂ.ಗೆ ಹೆಚ್ಚಿಸಲು ಒತ್ತಾಯ ಕೇಳಿ ಬಂದಿದೆ. ಡಿಸಿಸಿ ಬ್ಯಾಂಕಿನ ಕೇಂದ್ರ ಕಚೇರಿ ಸೇರಿ 100 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 2,081 ಸಿಬ್ಬಂದಿಗೆ ಜೀವ ವಿಮೆ ಮಾಡಿಸಲಾಗುತ್ತಿದೆ. ಇದರಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಶೇ.58ರಷ್ಟು, ಉಳಿದಿದ್ದನ್ನು ಆಯಾ ಸೊಸೈಟಿಗಳು ಹಣ ಭರಿಸುತ್ತವೆ ಎಂದರು.
ಉಪಾಧ್ಯಕ್ಷ ಭರಮಗೌಡ ಕಾಗೆ, ನಿರ್ದೇಶಕರಾದ ಅಪ್ಪಾಸಾಹೇಬ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ಚನ್ನರಾಜ ಹಟ್ಟಿಹೊಳಿ, ವಿರೂಪಾಕ್ಷಿ ಮಾಮನಿ, ನಾನಾಸಾಹೇಬ ಪಾಟೀಲ, ರಾಹುಲ ಜಾರಕಿಹೊಳಿ, ಅರವಿಂದ ಪಾಟೀಲ, ಮಹಾಂತೇಶ ದೊಡಗೌಡರ, ಸಿಇಒ ಎನ್.ಜಿ.ಕಲಾವಂತ ಇತರರಿದ್ದರು.

ಕಾನೂನು ಮೂಲಕವೇ ಬಿಸಿ ಮುಟ್ಟಿಸುತ್ತೇವೆ

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿಯಮ ಉಲ್ಲಂಘಿಸಿ ಯಾರಿಗೂ ಸಾಲ ಸೌಲಭ್ಯ ಕಲ್ಪಿಸಿಲ್ಲ. ಗುತ್ತಿಗೆದಾರ ಜಯಶೀಲ್ ಶೆಟ್ಟಿಗೆ 120 ಕೋಟಿ ರೂ. ಸಾಲ ನೀಡಲು ಬೆಳಗಾವಿ ನಗರದಲ್ಲಿರುವ 100 ಕೋಟಿ ರೂ. ಮೌಲ್ಯದ 4 ಎಕರೆ ಜಮೀನು ಹಾಗೂ ನೀರಾವರಿ ಇಲಾಖೆಯಿಂದ ಬಾಕಿ ಬರಬೇಕಿದ್ದ 700 ಕೋಟಿ ರೂ. ಗೆ ಸಂಬಂಧಿಸಿದಂತೆ ದಾಖಲೆ ಅಡವಿಟ್ಟುಕೊಳ್ಳಲಾಗಿದೆ. ಆದರೆ, ಕೆಲವರು ಬ್ಯಾಂಕ್ ಹಾಗೂ ಗುತ್ತಿಗೆದಾರನಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹರಡಿಸುವವರಿಗೆ ಕಾನೂನು ಮೂಲಕವೇ ಬಿಸಿ ಮುಟ್ಟಿಸುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿಲ್ಲ

ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದಿರುವ ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷ ತಪ್ಪದೆ ಕಂತು ಕಟ್ಟುತ್ತಿವೆ. ಯಾವುದೇ ಕಾರ್ಖಾನೆ ಬಾಕಿ ಉಳಿಸಿಕೊಂಡಿಲ್ಲ. ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ನೂರಾರು ಕೋಟಿ ರೂ. ಮೌಲದ್ಯ ಆಸ್ತಿ ದಾಖಲೆ ಪಡೆದು 80 ಕೋಟಿ ರೂ. ನೀಡಲಾಗಿತ್ತು. ಇದೀಗ 14 ಕೋಟಿ ರೂ. ಬಡ್ಡಿ ಕಟ್ಟಿದ್ದಾರೆ. ಬಾಕಿ ಕಂತು ಕಟ್ಟಲು ಮಾರ್ಚ್‌ವರೆಗೆ ಕಾಲಾವಕಾಶವಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ಖಾಲಿ ಹುದ್ದೆ ಭರ್ತಿಗೆ ಕ್ರಮ

ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನ ನೂತನ ಶಾಖೆ ಆರಂಭಿಸುವ ಕುರಿತು ಪ್ರಸ್ತಾವ ಬಂದಿರುವ ಹಿನ್ನೆಲೆ ಹೊಸ ಶಾಖೆ
ತೆರೆಯುವುದು ಹಾಗೂ ಖಾಲಿ ಉಳಿದಿರುವ 152 ಸಿಬ್ಬಂದಿ  ಭರ್ತಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಜೊಲ್ಲೆ ಹೇಳಿದರು.

Spread the love

About Laxminews 24x7

Check Also

ಮುಂಬರುವ ಗ್ರಾ.ಪಂ,ಜಿ.ಪಂ,ತಾ.ಪಂ ಚುನಾವಣೆ ಬಿಜೆಪಿ ತಯಾರಿ – ಮತಕ್ಷೇತ್ರವಾರು ಸಂಘಟನಾತ್ಮಕ ಸಭೆ

Spread the loveಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಬರುವ ಗ್ರಾಮ ಪಂಚಾಯಿತಿ, ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ