ಹಾವೇರಿ: ಕೊರೊನಾಕ್ಕಿಂತ ದೊಡ್ಡ ಗ್ರಹಣ ಹಿಡಿಯೋದಿಲ್ಲ. ಗ್ರಹಣ ಎಂದು ಯಾರೂ ಉಸಿರಾಡೋದು ನಿಲ್ಲಿಸಿಲ್ಲ. ಗ್ರಹಣ ಎಂಬುದು ಪ್ರಕೃತಿಯಲ್ಲಿ ನಡೆಯೋ ಚಟುವಟಿಕೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾತನಾಡಿದ ಅವರು, ಗ್ರಹಣಕ್ಕೆ ಅಷ್ಟೊಂದು ಮಹತ್ವ ಕೊಟ್ಟು ಮೂಢನಂಬಿಕೆ ಬಿತ್ತೋದು ಸರಿಯಲ್ಲ. ಗ್ರಹಣ ಹಿಡಿದಿದೆ ಅಂತಾ ಎಲ್ಲರೂ ಒಂದು ಕ್ಷಣ ಉಸಿರು ನಿಲ್ಲಿಸಲಿ ನೋಡೋಣ. ಗ್ರಹಣಕ್ಕೆ ಅಷ್ಟು ಮಹತ್ವ ಕೊಡೋ ಅಗತ್ಯವಿಲ್ಲ. ನಮ್ಮ ಕೆಲಸವನ್ನ ನಾವು ಮಾಡಿಕೊಂಡು ಹೋದರೆ ಸಾಕು ಎಂದರು.
ರೈತರನ್ನು ನೆನೆಯಲು ನಮಸ್ಕಾರ, ಅನ್ನದಾತನಿಗೊಂದು ನಮನ, ಜೈ ಕಿಸಾನ್ ಎಂಬ ಕಾಲರ್ ಟ್ಯೂನ್ ಮಾಡಲಾಗಿದೆ. ಕೃಷಿ ಇಲಾಖೆಯ ಎಲ್ಲಾ ಫೋನ್‍ಗಳಿಗೆ ಕಾಲರ್ ಟ್ಯೂನ್ ಅಳವಡಿಸಲು ಆದೇಶ ಹೊರಡಿಸುವಂತೆ ಸುತ್ತೋಲೆ ಕಳಿಸಲು ಹೇಳಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಚೀನಾ ವಿರುದ್ಧ ಪ್ರಧಾನಿ ಮೋದಿ ಅವರ ಹೇಳಿಕೆಯ ಕುರಿತು ಕಾಂಗ್ರೆಸ್ ನಾಯಕರ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬೇರೊಂದು ದೇಶ ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ಪ್ರತ್ಯುತ್ತರ ನೀಡುವುದು ನಮ್ಮ ಕರ್ತವ್ಯ. ಕಾಂಗ್ರೆಸ್ ಪಕ್ಷ ನಾಯಕರಿಗೆ ಟೀಕೆ ಮಾಡೋದು ಬಿಟ್ರೆ ಬೇರೆ ಗೊತ್ತಿಲ್ಲ. ನಮ್ಮ ಪ್ರಧಾನಿಗಳು ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕೊರೊನಾಕ್ಕೂ ಟೀಕೆ, ಪ್ರತ್ಯುತ್ತರಕ್ಕೂ ಟೀಕೆ ಮಾಡುವುದು ಎಂದರೇ ಟೀಕೆಗೆ ಅರ್ಥವಿರೋದಿಲ್ಲ ಎಂದರು.