Breaking News

15 ಕೋಟಿ ರೂ. ವೆಚ್ಚದ ಗೋಸಬಾಳ ಗ್ರಾಮದಲ್ಲಿ 110 ಕೆವ್ಹಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

 

ಗೋಕಾಕ : ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಹೊಸ 110 ಕೆವ್ಹಿ ವಿದ್ಯುತ್ ಉಪಕೇಂದ್ರ ನಿರ್ಮಾಣದ ಬಳಿಕ ಈ ಭಾಗದ ಎಲ್ಲಾ ಗ್ರಾಮಗಳ ಸಾರ್ವಜನಿಕರಿಗೆ ನಿಗದಿತ ಪ್ರಮಾಣದ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಶುಕ್ರವಾರದಂದು ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಕೆಪಿಟಿಸಿಎಲ್‍ನಿಂದ 15.09 ಕೋಟಿ ರೂ. ವೆಚ್ಚದ 110 ಕೆವ್ಹಿ ಉಪಕೇಂದ್ರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹೊಸ ಉಪಕೇಂದ್ರ ನಿರ್ಮಾಣದಿಂದ ಇಡೀ ರೈತ ಸಮೂಹಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ ಎಂದು ಅವರು ಹೇಳಿದರು.
ಈ ಭಾಗದ ಸಾರ್ವಜನಿಕರ ಆಶಯದಂತೆ ಗೋಸಬಾಳ ಗ್ರಾಮದ ಹತ್ತಿರ 110 ಕೆವ್ಹಿ ವಿದ್ಯುತ್ ಉಪಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇದರಿಂದ ಈಗಿರುವ 110 ಕೆವ್ಹಿ ಕುಲಗೋಡ ಉಪಕೇಂದ್ರದ ಮೇಲಿನ ಭಾರ ಗಣನೀಯವಾಗಿ ಕಡಿಮೆಯಾಗುವುದರಿಂದ ಕುಲಗೋಡ ಉಪಕೇಂದ್ರದ ಗ್ರಾಮಗಳಿಗೂ ಸಹ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಹಾಲಿ 11 ಕೆವ್ಹಿ ಲೈನ್‍ಗಳ ಉದ್ದ ಕಡಿಮೆಯಾಗುತ್ತಿದ್ದು, ವಿದ್ಯುತ್ ನಷ್ಟವು ಕಡಿಮೆಯಾಗಿ ವಾರ್ಷಿಕ 3.394 ದಶಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಹೇಳಿದರು.
ಗೋಸಬಾಳ ಹಾಗೂ ಸುತ್ತಮುತ್ತಲಿನ ಕಳ್ಳಿಗುದ್ದಿ, ಹೊನಕುಪ್ಪಿ, ಮನ್ನಿಕೇರಿ, ನಿಂಗಾಪೂರ, ಸಜ್ಜಿಹಾಳ ಹಾಗೂ ಬಿಲಕುಂದಿ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ರೈತ ಸಮೂಹಕ್ಕೂ ಸಹ ತಮ್ಮ ಬೆಳೆಗಳಿಗೆ ನಿರಂತರ ನೀರು ಹಾಯಿಸಲು ಬಹು ಉಪಯುಕ್ತವಾಗಲಿದೆ. ಇದಕ್ಕಾಗಿ 15 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ಪ್ರಾರಂಭಿಸಲು ವಿಳಂಬವಾಗಿದೆ. 8 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.
12 ಕೋಟಿ ರೂ. ವೆಚ್ಚದಲ್ಲಿ ಹದಗೆಟ್ಟಿದ್ದ ಬೆಟಗೇರಿ-ಕೌಜಲಗಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಉಳಿದಂತೆ ಗೋಸಬಾಳ-ಬಿಲಕುಂದಿ, ಕೌಜಲಗಿ-ಹೊನಕುಪ್ಪಿ ರಸ್ತೆಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ರೈತರ ಬೇಡಿಕೆಗೆ ಅನುಸಾರ ನಿರ್ಮಾಣ ಮಾಡಲಾಗುತ್ತಿದೆ. ಈ ಭಾಗಕ್ಕೆ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜೊತೆಗೆ ಗೋಸಬಾಳ ಗ್ರಾಮಸ್ಥರ ಬೇಡಿಕೆಯಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರೌಢ ಶಾಲೆಯನ್ನು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಗೋಸಬಾಳದಲ್ಲಿ ನಿರ್ಮಾಣವಾಗಲಿರುವ 110 ಕೆವ್ಹಿ ವಿದ್ಯುತ್ ಉಪಕೇಂದ್ರದಿಂದ ಕೃಷಿಯನ್ನೇ ಅವಲಂಬಿತರಾಗಿರುವ ರೈತರಿಗೆ ಅನುಕೂಲವಾಗಲಿದೆ. 110 ಕೆವ್ಹಿ 8 ವಿದ್ಯುತ್ ಉಪಕೇಂದ್ರಗಳ ಪೈಕಿ 6 ವಿದ್ಯುತ್ ಉಪಕೇಂದ್ರಗಳು ಅರಭಾವಿ ಮತಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಲಿವೆ. ಗ್ರಾಮೀಣ ಭಾಗದ ನಾಗರೀಕರ ಬದುಕು ಹಸನಾಗಲು ವಿದ್ಯಾವಂತರು ಹಳ್ಳಿಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ರೈತರ ಆದಾಯ ದ್ವಿಗುಣಗೊಳಿಸುವ ಅವರ ಕನಸು ಸಾಕಾರಗೊಳ್ಳಲಿದೆ. ಗ್ರಾಮೀಣ ಭಾಗದಲ್ಲಿ ನಿರಂತರ ಜ್ಯೋತಿಯಿಂದ ಎಲ್ಲ ಜನತೆಗೂ ಅನುಕೂಲವಾಗಲಿದೆ. ಈ ಮೊದಲಿದ್ದ ವಿದ್ಯುತ್ ಸಮಸ್ಯೆ ಈಗ ಸಂಪೂರ್ಣವಾಗಿ ನಿವಾರಣೆಯಾಗಿದೆ. ಅಧಿಕಾರಿಗಳು ರೈತರಿಗೆ ಉಪಯುಕ್ತ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಜೀವದ ಹಂಗನ್ನು ಬದಿಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಪವರ್ ಮ್ಯಾನಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಅವರು ಹೇಳಿದರು.
ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಹಿರಿಯ ಮುತ್ಸದ್ಧಿ ಅನಂತ ನಾಯಿಕ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ತಾಪಂ ಸದಸ್ಯರಾದ ನೀಲವ್ವಾ ಬಳಿಗಾರ, ಲಕ್ಷ್ಮಣ ನೀಲನ್ನವರ, ಪ್ರಭಾಶುಗರ ನಿರ್ದೇಶಕ ಎಂ.ಆರ್. ಭೋವಿ, ರವಿ ಪರುಶೆಟ್ಟಿ, ಗೋಸಬಾಳ ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಯ್ಯಾ ಮಠದ, ಶಿವಲಿಂಗ ಬಳಿಗಾರ, ಬಿ.ಜಿ. ಪಾಟೀಲ, ಸುಭಾಸ ಹಾವಾಡಿ, ಮುಖಂಡರಾದ ಬಾಳಪ್ಪ ಬುಳ್ಳಿ, ಸತ್ತೆಪ್ಪ ಹೊಸಟ್ಟಿ, ಬಸವಂತ ಕೋಣಿ, ಲಕ್ಷ್ಮಣ ಚಂದರಗಿ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎನ್. ಮುತಾಲಿಕದೇಸಾಯಿ, ಎಸ್.ಬಿ. ಲೋಕನ್ನವರ, ಉಧ್ಯಮಿ ರಾಜೇಂದ್ರ ದೇಸಾಯಿ, ಕೆಪಿಟಿಸಿಎಲ್ ಬೆಳಗಾವಿ ಅಧೀಕ್ಷಕ ಅಭಿಯಂತರ ಶ್ರೀಕಾಂತ ಸಸಾಲಟ್ಟಿ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಗಿರಿಧರ ಕುಲಕರ್ಣಿ, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ವರೂರ, ಗೋಕಾಕ ಎಇಇ ಎಸ್.ಪಿ. ವರಾಳೆ, ಬಸಪ್ಪ ಕಪರಟ್ಟಿ, ಹನಮಂತ ಹಾವಾಡಿ, ಸಿದ್ಧಾರೂಢ ಮಳ್ಳಿಕೇರಿ, ರಮೇಶ ಇಟ್ನಾಳ, ಶಿವಾನಂದ ಮಾಡಮಗೇರಿ, ಸುಭಾಸ ಕರೆನ್ನವರ, ಸೇರಿದಂತೆ ಗೋಸಬಾಳ ಹಾಗೂ ಸುತ್ತಮುತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ

Spread the loveಬೆಂಗಳೂರು, (ಡಿಸೆಂಬರ್ 03): ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ