ಬೆಂಗಳೂರು, ಮೇ 8-ಆಟೋ ರಿಕ್ಷಾ , ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನ ನೀಡಲು ಅರ್ಜಿಗಳನ್ನುಆನ್‍ಲೈನ್‍ನಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು ಅರ್ಜಿಗಳನ್ನು ಸಲ್ಲಿಸಲು ಅನಾವಶ್ಯಕವಾಗಿ ಪರಿಶ್ರಮ ಪಡೆಯುವ ಅವಶ್ಯಕತೆ ಇಲ್ಲ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಆಟೋ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನವನ್ನು ಅವರವರ ಖಾತೆಗೆ ನೇರವಾಗಿ ವರ್ಗಾಯಿಸುವುದರಿಂದ ಯಾರೂ ಆತಂಕಕ್ಕೆ ಒಳಗಾಗಬಾರದೆಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಕೊರೊನಾ ವೈರಸ್ ತಡೆಗಟ್ಟಲು ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಸಂಕಷ್ಟಕ್ಕೊಳಗಾಗಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂ.ಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಈ ಪರಿಹಾರ ಧನವನ್ನು ಪಡೆಯಲು ಅಂಚೆ ಕಚೇರಿ ಮುಂದೆ ಚಾಲಕರು ಸರತಿ ಸಾಲಿನಲ್ಲಿ ನಿಂತು ಅರ್ಜಿ ಕಳುಹಿಸಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಪ್ರಕಟಣೆ ನೀಡಿರುವುದಾಗಿ ತಿಳಿಸಿದೆ.
ಕರೋನಾ ವೈರಸ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಸಾರಿಗೆ ಸಂಪರ್ಕ ವ್ಯವಸ್ಥೆಯು ಸ್ತಬ್ಧವಾಗಿದೆ. ಇದರಿಂದ ಟ್ಯಾಕ್ಸಿ ಮತ್ತು ಆಟೋ ಚಾಲಕರು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಕರ್ನಾಟಕ ಸರ್ಕಾರವು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ.
ವೈರಸ್ ತಡೆಯಲು ಕೇಂದ್ರ ಸರ್ಕಾರವು ದೇಶಾದ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಅನ್ನು ಮುಂದುವರಿಸಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಇದೀಗ ಕೆಲವು ವಿನಾಯ್ತಿಗಳೊಂದಿಗೆ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಿದೆ. ಹೀಗಿದ್ದರೂ ಆಟೋ ಮತ್ತು ಟ್ಯಾಕ್ಸಿ ಸೇವೆಗಳ ಮೇಲೆ ನಿರ್ಬಂಧವನ್ನು ಮುಂದುವರಿಸಲಾಗಿದ್ದು, ಯಾವುದೇ ರೀತಿಯ ಆದಾಯವಿಲ್ಲದೆ ಬಹುತೇಕ ಆಟೋ ಮತ್ತು ಟ್ಯಾಕ್ಸಿ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕರ್ನಾಟಕವು ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಅಡಿ ತಲಾ ರೂ. 5 ಸಾವಿರ ಧನಸಹಾಯವನ್ನು ಘೋಷಿಸಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಇದು ಸಹಕಾರಿಯಾಗಲಿದೆ. ಸುಮಾರು 7.75 ಲಕ್ಷ ನೋಂದಾಯಿತ ಟ್ಯಾಕ್ಸಿ ಮತ್ತು ಆಟೋ ಚಾಲಕರು ಸಹ ವಿಶೇಷ ಪ್ಯಾಕೇಜ್ ಅಡಿ ಹಣಕಾಸು ನೆರವು ಪಡೆದುಕೊಳ್ಳಲಿದ್ದಾರೆ.