Breaking News

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿಯಿಂದ ಜಿಲ್ಲಾಧಿಕಾರಿಗೆ ಮನವಿ

Spread the love

ಬೆಳಗಾವಿರಾಜ್ಯದ ವಿವಿಧ ಸರ್ಕಾರಿ, ಅನುದಾನಿತ ಕಾಲೇಜ್‌ಗಳಲ್ಲಿ ನಕಲಿ ಪಿಎಚ್‌ಡಿ ಪದವಿ ಹೊಂದಿರುವವರು ಅತಿಥಿ ಹಾಗೂ ಪೂರ್ಣ ಪ್ರಮಾಣದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಕಾಲೇಜ್ ರಸ್ತೆಯಿಂದ ಪ್ರತಿಭಟನಾ ರ‌್ಯಾಲಿಯಲ್ಲಿ ಆಗಮಿಸಿದ ವಿದ್ಯಾರ್ಥಿಗಳು, ಕೆಲಹೊತ್ತು ಚನ್ನಮ್ಮ ವೃತ್ತದಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೊಹಮ್ಮದ್ ರೋಷನ್‌ರಿಗೆ ಮನವಿ ಪತ್ರ ಸಲ್ಲಿಸಿದರು.
ಪಿಎಚ್‌ಡಿ ದಾಖಲೆಗಳು ನಕಲಿ ಎಂಬ ಆರೋಪಗಳು ರಾಜ್ಯದಲ್ಲಿ ಅನೇಕ ದಿನಗಳಿಂದ ಕೇಳಿ ಬರುತ್ತಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯನುಂಟು ಮಾಡುತ್ತಿದ್ದು, ರಾಜ್ಯದ ಶಿಕ್ಷಣದ ಗುಣಮಟ್ಟಕ್ಕೂ ಕಳಂಕ ತರುವಂತಹ ಸಂಗತಿಯಾಗಿದೆ, ಜಮಖಂಡಿ, ಹಾವೇರಿ ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಸಿಕ್ಕಿ ಬೀಳುವ ಭಯದಿಂದ ಕೆಲವರು ಕೆಲಸದಿಂದಲೇ ನಿರ್ಗಮಿಸಿದ್ದಾರೆ. ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಇದು ಖಂಡನೀಯ. ಕೂಡಲೇ ಅಂತವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಕಲಿ ದಾಖಲೆ ನೀಡಿದವರಿಂದಾಗಿ, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ರೀತಿಯ ನಕಲಿ ಪಿಎಚ್‌ಡಿ ಪದವಿಗಳನ್ನು ತಯಾರಿಸುವ ಜಾಲವನ್ನು ಪತ್ತೆಹಚ್ಚಬೇಕು. ರಾಜ್ಯದ ಬಹುತೇಕ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿ ಕೊರತೆಯಿದ್ದು, ಪಠ್ಯಕ್ರಮ ಸರಿಯಾದ ಸಮಯಕ್ಕೆ ಮುಗಿಯುತ್ತಿಲ್ಲ. 32 ವಿವಿಗಳಲ್ಲಿ 9,292 ಬೋಧಕ ಬೋಧಕೇತರ ಹುದ್ದೆಗಳು ಹಾಗೂ ಐದು ಉಪಕುಲಪತಿಗಳ ಹುದ್ದೆ ಭರ್ತಿಯಾಗಿಲ್ಲ. ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನಗರ ಕಾರ್ಯದರ್ಶಿ ಪ್ರಥಮಗೌಡ ಪಾಟೀಲ, ಪ್ರಜ್ವಲ ಅಣ್ಣಿಗೇರಿ, ದರ್ಶನ ವಡ್ಡರಳ್ಳಿ, ಮೇಘಾ ಪಾಟೀಲ ಇತರರಿದ್ದರು.

Spread the love

About Laxminews 24x7

Check Also

ಅರಣ್ಯ ಪ್ರದೇಶದಲ್ಲಿ ಬಚ್ಚಿಟ್ಟಿದ್ದ 64 ಸಾವಿರ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ

Spread the loveಕಾರವಾರ: ಕಾರವಾರ-ಗೋವಾ ಗಡಿ ಭಾಗದಲ್ಲಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಗೋವಾದಿಂದ ಕಾರವಾರಕ್ಕೆ ಸಾಗಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ