ಶಿವಮೊಗ್ಗ: ‘ಪೊಲೀಸ್ ಸಿಬ್ಬಂದಿ ಆರೋಗ್ಯವಾಗಿದ್ದರೆ ಮತ್ತು ಮನೆಯಲ್ಲಿ ನೆಮ್ಮದಿ ಇದ್ದರೆ ಇಲಾಖೆ ಸಶಕ್ತವಾಗಿರುತ್ತದೆ. ಆಗ ಸಾರ್ವಜನಿಕರಿಗೂ ಒಳ್ಳೆಯ ಸೇವೆ ಸಿಗಲಿದೆ. ಹೀಗಾಗಿ ಸಿಬ್ಬಂದಿಯ ಹಿತ ಕಾಯಲು ಇಲಾಖೆ ಬದ್ಧವಾಗಿದೆ’ ಎಂದು ಎಡಿಜಿಪಿ ಅಲೋಕ್‌ಕುಮಾರ್ ಹೇಳಿದರು.
ಇಲ್ಲಿನ ಡಿಎಆರ್ ಮೈದಾನದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬ ವರ್ಗದವರ ಜೊತೆ ಸಭೆ ನಡೆಸಿ ಅವರ ಯೋಗಕ್ಷೇಮ ಆಲಿಸಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಪೊಲೀಸರು ಕರ್ತವ್ಯದ ಮೇಲೆ ಹಲವು ದಿನಗಳ ಕಾಲ ಬೇರೆ ಊರಿಗೆ ಹೋಗಿ ಬಂದಾಗ ಮನೆಯಲ್ಲಿ ಅವರ ಕುಟುಂಬದವರು ವಿನಾಕಾರಣ ಕ್ಷುಲ್ಲಕ ವಿಷಯಗಳಿಗೆ ನೆಮ್ಮದಿ ಕೆಡಿಸಬಾರದು. ಸಿಬ್ಬಂದಿ ಹಾಗೂ ಅವರ ಕುಟುಂಬದವರ ಆರೋಗ್ಯ ನಮಗೆ ಅತಿಮುಖ್ಯ. ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ಉನ್ನತ ಶಿಕ್ಷಣಕ್ಕೆ ತರಬೇತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.
‘ಪೊಲೀಸ್ ಸಿಬ್ಬಂದಿಯ ದೇಹಾರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಶಾಲೆ ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಪೊಲೀಸರು ಯಾವಾಗಲೂ ಸದೃಢರಾಗಿರಬೇಕು. ಆಗ ಸಾರ್ವಜನಿಕರಿಗೆ ಪೊಲೀಸರ ಮೇಲೆ ನಂಬಿಕೆ ಬರುತ್ತದೆ’ ಎಂದು ಕಿವಿಮಾತು ಹೇಳಿದರು.
‘ಬೆದರಿಕೆ ಹಾಕಿ ಹಣ ವಸೂಲಿ, ಗಾಂಜಾ, ಮಟ್ಕಾ ಮುಂತಾದ ಕಾನೂನುಬಾಹಿರ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ, ಜೊತೆಗೆ ಅವರ ಜಾಮೀನು ರದ್ದು ಮಾಡಲು ಶಿಫಾರಸು ಮಾಡಲಾಗುವುದು. ಅಕ್ರಮ ಮರಳು ಮತ್ತು ಗಣಿಗಾರಿಕೆ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮಾಂತರದಲ್ಲಿ ಮತ್ತು ನಗರದ ಹೊರಭಾಗದಲ್ಲಿ ಕೆಲವು ಮನೆಯೊಳಗೆ ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ, ಅದರ ನಿಯಂತ್ರಣ ಅಬಕಾರಿ ಇಲಾಖೆಯ ಜವಾಬ್ದಾರಿ. ಅಕ್ರಮ ಮದ್ಯ ಮಾರಾಟ ಕಂಡುಹಿಡಿದು ಶಿಕ್ಷೆ ಕೊಡಿಸುವ ಜವಾಬ್ದಾರಿ ಅಬಕಾರಿ ಇಲಾಖೆಯದ್ದು, ಎಲ್ಲವೂ ಪೊಲೀಸರು ಮಾಡಲಾಗುವುದಿಲ್ಲ’ ಎಂದರು.
‘ಬ್ಯಾಕೋಡು ಜೋಡಿ ಕೊಲೆಗೆ ಸಂಬಂಧಿಸಿದಂತೆ ಮೂರು ವರ್ಷಗಳಾದರೂ ಆರೋಪಿಗಳ ಬಂಧನವಾಗಿಲ್ಲ’ ಎಂಬ ಪ್ರಶ್ನೆಗೆ, ‘ಈ ಪ್ರಕರಣ ಕೈಬಿಟ್ಟಿಲ್ಲ. ಇದುವರೆಗೆ 150 ಜನರನ್ನು ವಿಚಾರಣೆಗೆ ಒಳಗಪಡಿಸಲಾಗಿದೆ. ಮತ್ತೆ ತನಿಖೆ ಚುರುಕು ಗೊಳಿಸಲಾಗುವುದು’ ಎಂದರು.
ಈ ಸಂದರ್ಭದಲ್ಲಿ ಪೂರ್ವವಲಯ ಐಜಿಪಿ ತ್ಯಾಗರಾಜ್, ಎಸ್ಪಿ ಮಿಧುನ್ ಕುಮಾರ್, ಹೆಚ್ಚುವರಿ ಎಸ್ಪಿ ವಿಕ್ರಮ್ ಅಮಟೆ, ಡಿವೈಎಸ್ಪಿ ಬಾಲರಾಜ್, ಡಿಎಆರ್ ಡಿವೈಎಸ್ಪಿ ಕೃಷ್ಣಮೂರ್ತಿ, ಅಧಿಕಾರಿಗಳಾದ ರೋಷನ್, ಜಿತೇಂದ್ರ ಇದ್ದರು.