Breaking News

ಮೈಸೂರು ಸ್ಯಾಂಡಲ್ ಸೋಪ್ ಜತೆ ಹಲವು ಉತ್ಪನ್ನಗಳಿಗೆ ಸ್ಪರ್ಶ ನೀಡಿದ ನಟಿ ತವನ್ನಾ

Spread the love

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿ., (ಕೆಎಸ್‌ಡಿಎಲ್) ಹೊಸದಾಗಿ ಹೊರತಂದಿರುವ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಸಂಸ್ಥೆಯ 57 ಉತ್ಪನ್ನಗಳನ್ನು ಬಹು ಭಾಷ ನಟಿ ತಮನ್ನಾ ಭಾಟಿಯಾ ಬಿಡುಗಡೆ ಮಾಡಿದರು. ಈ ಹಿಂದೆ ಇದ್ದ 36 ಹಳೆ ಉತ್ಪನ್ನಗಳು ಸೇರಿದರೆ ಕೆಎಸ್‌ಡಿಎಲ್ ಉತ್ಪನ್ನಗಳ ಸಂಖ್ಯೆ ಈಗ 93ಕ್ಕೆ ಏರಿದಂತಾಗಿದೆ.
ತಾಜ್ ವೆಸ್ಟ್ ಎಂಡ್ ಹೋಟೆಲಿನ ಝಗಮಗಿಸುವ ಸಭಾಂಗಣದಲ್ಲಿ ಅದ್ದೂರಿಯಾಗಿ ಜಗಮಗಿಸುವ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಿಳಿಗೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಉಟ್ಟುಕೊಂಡು, ನೆರೆದಿದ್ದವರ ಮೋಡಿ ಮಾಡುವಂತೆ ವೇದಿಕೆಯ ಮೇಲೆ ವಿಶೇಷವಾದ ರೀತಿಯಲ್ಲಿ ಪ್ರತ್ಯಕ್ಷರಾದವರು ತಮನ್ನಾ ಭಾಟಿಯಾ ಅವರು ಇನ್ನು ಮುಂದೆ ತಾವೇ ಕೆಎಸ್‌ಡಿಎಲ್‌ನ ಉತ್ಪನ್ನಗಳಿಗೆ ಹೊಸ ಬ್ರಾಂಡ್ ಅಂಬಾಸಿಡರ್ ಎನ್ನುವುದನ್ನು ಅಧಿಕೃತವಾಗಿ ಸಾರಿದರು.
ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕೆಎಸ್‌ಡಿಎಲ್ ಸಂಸ್ಥೆಯ ಪ್ರಚಾರ ರಾಯಭಾರಿಯಾದ ಅವರು, ಕನ್ನಡದಲ್ಲಿಯೇ ಮಾತನಾಡುವ ಮೂಲಕ ಮಂತ್ರಮುಗ್ದರನ್ನಾಗಿಸಿದರು.  ಕೆಎಸ್‌ಡಿಎಲ್, ಹೊಸ ಯುಗಕ್ಕೆ ಕಾಲಿಟ್ಟ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹಾಗೂ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರ ನೇತೃತ್ವದ ತಂಡ. ಹೊಸ ಪ್ಯಾಕಿಂಗ್ ಪಡೆದುಕೊಂಡಿರುವ ಉತ್ಪನ್ನಗಳಲ್ಲಿ ಗಂಧದ ಎಣ್ಣೆ, ಮಲ್ಲಿಗೆ (ಜಾಸ್ಮೀನ್) ಪರಿಮಳದ ಸೋಪು, ಸುಗಂಧದ್ರವ್ಯ, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ, ಸಾವಯವ ಉತ್ಪನ್ನಗಳವರೆಗೆ 60 ಉತ್ಪನ್ನಗಳಿವೆ.  ಜೊತೆಯಲ್ಲೇ ತಮನ್ನಾ ಸಂಸ್ಥೆಯ ಪರವಾಗಿ ನಡೆಸಿರುವ ಪ್ರಚಾರದ ಹತ್ತಾರು ಜಾಹೀರಾತುಗಳು ಕೂಡ ಬಿಡುಗಡೆಯಾದವು. ಇದೇ ಸಂದರ್ಭದಲ್ಲಿ ಸಂಸ್ಥೆಯ ಇತಿಹಾಸವನ್ನು ಕಟ್ಟಿಕೊಡುವ ಸುಗಂಧ ಸಿರಿ ಮತ್ತು ಅರೋಮ್ಯಾಟಿಕ್ ಜರ್ನೀಸ್ ಕಾಫಿ ಟೇಬಲ್ ಪುಸ್ತಕಗಳ ಲೋಕಾರ್ಪಣೆಯೂ ನೆರವೇರಿತು.
ಸೋಪು ಕೇವಲ ಸಾಬೂನಲ್ಲ ಭಾವನೆಗಳ ಮೆರವಣಿಗೆ: ತಮನ್ನ
ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ತಮನ್ನಾ ಮಾತನಾಡಿ, ಮೈಸೂರು ಸ್ಯಾಂಡಲ್ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು, ಬಾಲ್ಯ ಮತ್ತು ಸುಮಧುರ ನೆನೆಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪ್ ಇಲ್ಲ. ಮೈಸೂರು ಸ್ಯಾಂಡಲ್ ಸೋಪ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಮುಂದಿನ ಎರಡು ವರ್ಷ ನಾನು ಈ ಗುಣಮಟ್ಟದ ಉತ್ಪನ್ನಗಳ ರಾಯಭಾರಿಯಾಗಿ ಕೆಲಸ ಮಾಡಲಿದ್ದೇನೆ ಎಂದು ಬಣ್ಣಿಸಿದರು.
ಕೆಎಸ್‌ಡಿಎಲ್ ರ್ತು ಹೆಚ್ಚಿಸುವ ಗುರಿ: ಎಂಬಿಪಿ
ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಾತನಾಡಿ ಕೆಎಸ್‌ಡಿಎಲ್ ಉತ್ಪನ್ನಗಳ ಪೈಕಿ ಸದ್ಯಕ್ಕೆ ಶೇ.1ರಷ್ಟು ಮಾತ್ರ ರಫ್ತಾಗುತ್ತಿದೆ. ಇದನ್ನು ಹೆಚ್ಚು ಮಾಡಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಹೊಸ ಉತ್ಪನ್ನಗಳಲ್ಲಿ ಮಹಾರಾಜ ಮತ್ತು ಮಹಾರಾಣಿ ಸೀರೀಸ್ ಇವೆ. ಪರಂಪರೆಯ ಮಹತ್ವವನ್ನು ಬಿಟ್ಟುಕೊಡದೆ ಸಮಕಾಲೀನ ಅಭಿರುಚಿಯನ್ನು ಇಲ್ಲಿ ಬೆಸೆದಿದ್ದೇವೆ ಎಂದರು.
ಕೆಎಸ್‌ಡಿಎಲ್ ಕೇವಲ ಸ್ಯಾಂಡಲ್ ಸೋಪ್‌ಗೆ ಮಾತ್ರ ಸೀಮಿತವಾಗಿಲ್ಲ. ನಾವೀಗ ಜಾಸ್ಮೀನ್ ಪರಿಮಳದ ಐಷಾರಾಮಿ ಸೋಪನ್ನೂ ತಯಾರಿಸುತ್ತಿದ್ದೇವೆ. ಮಲ್ಲಿಗೆಯ ತೈಲ ಲೀಟರಿಗೆ 4 ಲಕ್ಷ ರೂಪಾಯಿಗೂ ಜಾಸ್ತಿ ಇದೆ. ನಮ್ಮಲ್ಲಿ ತಯಾರಾಗುವ ಈ ಸೋಪ್‌ಗೆ 400 ರೂಪಾಯಿ ಇಟ್ಟಿದ್ದೇವೆ. ಯೂರೋಪಿನ ಮಾರುಕಟ್ಟೆಯಲ್ಲಿ ಈ ತರಹದ ಸಾಬೂನಿಗೆ ಭಾರೀ ಬೇಡಿಕೆ ಇದೆ. ಇದೇ ರೀತಿಯಲ್ಲಿ ಸುಗಂಧ ದ್ರವ್ಯಗಳ ವಲಯವನ್ನೂ ಪ್ರವೇಶಿಸಿದ್ದೇವೆ. ಇದಕ್ಕಾಗಿ ಸಂಸ್ಥೆಯ ಉನ್ನತಾಧಿಕಾರಿಗಳು ಕೊಯಮತ್ತೂರು, ಕನೌಜ್‌ಗೆ ತೆರಳಿ, ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆ ಎಂದರು.
500 ಕೋಟಿ ರೂ ಲಾಭದ ಗುರಿ: ಅಪ್ಪಾಜಿಗೌಡ
ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಸಿ ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, ಈ ಸಾಲಿನಲ್ಲಿ ಸಂಸ್ಥೆಯ ವಹಿವಾಟು 2,000 ಕೋಟಿ ರೂ.ಗೆ ಹಿಗ್ಗಿಸುವ ಗುರಿ ಹೊಂದಲಾಗಿದ್ದು, ಲಾಭವು 500 ಕೋಟಿ ರೂ. ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಹಿವಾಟು ವಿಸ್ತರಿಸಲು ಆಧುನಿಕ ವಹಿವಾಟು ತಂತ್ರಗಳನ್ನ ಅಳವಡಿಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 3 ಕೋಟಿ ಫಾಲೋಯರ್ಸ್ ಹೊಂದಿರುವ, ಅಖಿಲ ಭಾರತ ಮಟ್ಟದ ವರ್ಚಸ್ಸಿರುವ ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿರುವುದು ಇದರ ಒಂದು ಭಾಗವಾಗಿದೆ ಎಂದರು.
1786 ಕೋಟಿಗೆ ಹಿಗ್ಗಿದ ವಹಿವಾಟು:
ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಎಂ. ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವರ್ಷ 1571 ಕೋಟಿ ರೂ ಇದ್ದ ವಹಿವಾಟು ಈ ಬಾರಿ 1786 ಕೋಟಿಗೆ ಏರಿಕೆ ಆಗಿದೆ. ದೇಶ ವಿದೇಶದಲ್ಲಿಯೂ ಮೈಸೂರು ಸ್ಯಾಂಡಲ್ ಸೋಪು ಜನಪ್ರಿಯ ಮಾಡಲು ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸ್ವತಂತ್ರ ನಿರ್ದೇಶಕ ಅರವಿಂದ ಗಲಗಲಿ, ತಾಂತ್ರಿಕ ಸಲಹೆಗಾರ ರಜನೀಕಾಂತ್, ಶಿವಕುಮಾರ್, ಪ್ರತಿಮಾ ವಂದಗಾರು, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್, ಸ್ವತಂತ್ರ ನಿರ್ದೇಶಕ ಶಾಮರಾಜು ಮುಂತಾದವರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್‌ ನಾಪತ್ತೆ ಕೇಸ್‌ – ತನಿಖೆಗೆ ಪರಂ ಆದೇಶ

Spread the loveಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್  ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್‌ ನಾಪತ್ತೆ ಆರೋಪ ಪ್ರಕರಣದ ಬಗ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ