ಬೆಳಗಾವಿ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯಿಂದ ಕಣಕ್ಕಿಳಿದ ಅಭ್ಯರ್ಥಿಗಳ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿರುವುದಕ್ಕೆ ಶಿವಸೇನಾ(ಉದ್ಧವ್ ಠಾಕ್ರೆ ಬಣ) ಮುಖ್ಯಸ್ಥ ಸಂಜಯ್ ರಾವುತ್ ಆಕ್ಷೇಪ ವ್ಯಕ್ತಪಡಿಸಿದರು.
ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ವಡಗಾವಿಯಲ್ಲಿ ಬುಧವಾರ ನಡೆದ ಎಂಇಎಸ್ ಅಭ್ಯರ್ಥಿ ರಮಾಕಾಂತ್ ಕೊಂಡೂಸ್ಕರ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಗಡಿಭಾಗದ ಮರಾಠಿ ಭಾಷಿಕರು ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಕಳೆದ 60 ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಹೀಗಿರುವಾಗ. ಎಂಇಎಸ್ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಲು ಮಹಾರಾಷ್ಟ್ರದ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ನೈತಿಕ ಹಕ್ಕಿಲ್ಲ’ ಎಂದು ದೂರಿದರು.
‘ಮಹಾರಾಷ್ಟ್ರದ ನಾಯಕರು ಯಾವುದೇ ಪಕ್ಷದಲ್ಲಿದ್ದರೂ, ಎಂಇಎಸ್ ಬೆನ್ನಿಗೇ ನಿಲ್ಲಬೇಕು. ಮರಾಠಿ ಭಾಷಿಕರು ಹೆಚ್ಚಿರುವ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುವ ಅವರ ಬೇಡಿಕೆ ಬೆಂಬಲಿಸಬೇಕು. ನೀವೇ ಎಂಇಎಸ್ ವಿರುದ್ಧ ಪ್ರಚಾರ ಮಾಡಿದರೆ ಹೇಗೆ?’ ಎಂದು ಪ್ರಶ್ನಿಸಿದರು.
‘ಈ ಭಾಗದಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾದರೆ, ಶಿವಸೇನೆ ಮಾಜಿ ಮುಖ್ಯಸ್ಥ ಬಾಳಾಸಾಹೇಬ ಠಾಕ್ರೆ ಮಹಾರಾಷ್ಟ್ರದಲ್ಲಿ ಧ್ವನಿ ಎತ್ತುತ್ತಿದ್ದರು. ಈಗಲೂ ಶಿವಸೇನೆ ಎಂಇಎಸ್ ಜತೆಗಿದೆ. ಅವರ ಮನವಿಗೆ ಸ್ಪಂದಿಸುತ್ತ ಬಂದಿದೆ’ ಎಂದು ಹೇಳಿದರು.
‘ಇತ್ತೀಚೆಗೆ ನಾವು ಮಹಾರಾಷ್ಟ್ರ ದಿನ ಆಚರಿಸಿದ್ದೇವೆ. ಆದರೆ, ಕರ್ನಾಟಕದಲ್ಲಿ ಉಳಿದಿರುವ ಗ್ರಾಮಗಳನ್ನು ವಿಲೀನಗೊಳಿಸದ್ದರಿಂದ ಮಹಾರಾಷ್ಟ್ರವೂ ಅಪೂರ್ಣವಾಗಿದೆ. ಹೀಗಿರುವಾಗ ಮಹಾರಾಷ್ಟ್ರದ ಬಿಜೆಪಿ, ಕಾಂಗ್ರೆಸ್‌ನ ನಾಯಕರು ಇಲ್ಲಿಗೆ ಬಂದು ಪ್ರಚಾರ ಮಾಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಶಿವಸೇನೆಯು ಬಿಜೆಪಿಯಿಂದ ಹಿಂದುತ್ವ ಕಲಿತಿಲ್ಲ. ಬಾಬರಿ ಮಸೀದಿ ಧ್ವಂಸಗೊಳಿಸಿದಾಗ, ಬಿಜೆಪಿ ನಾಯಕರು ಜವಾಬ್ದಾರಿ ಹೊರಲಿಲ್ಲ. ಆದರೆ, ನಾವು ಹೊಣೆಗಾರಿಕೆ ನಿಭಾಯಿಸಿದೆವು’ ಎಂದು ಹೇಳಿದರು.
‘ಶಾಸಕ ಅಭ್ಯರ್ಥಿ ಅಭಯ ಪಾಟೀಲ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಸೋಲಿಸಿದ್ದಾರೆ. ಪಾಲಿಕೆ ಕಚೇರಿಯಿಂದ ಕೇಸರಿ ಧ್ವಜ ತೆರವುಗೊಳಿಸಿದರೂ ಅವರು ಪ್ರತಿಕ್ರಿಯಿಸಿಲ್ಲ. ಹಾಗಾಗಿ ಈ ಬಾರಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ತಿಳಿಸಿದರು.
‘ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಗೆಲ್ಲಲು ಮಹಾರಾಷ್ಟ್ರ ಸರ್ಕಾರ ಕೇಂದ್ರದ ವಿರುದ್ಧ ಹೋರಾಡುತ್ತಿದೆ. ಮಹಾರಾಷ್ಟ್ರವು ಇತರ ಭಾಷಿಕರನ್ನು ದ್ವೇಷಿಸುವುದಿಲ್ಲ. ಒಂದುವೇಳೆ ಮುಂಬೈನಲ್ಲಿ ದ್ವೇಷ ಸಾಧಿಸಿದರೆ, ಕರ್ನಾಟಕದ ಆರ್ಥಿಕತೆ ಮೇಲೆ ಶೇ 50ರಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ರಮಾಕಾಂತ ಕೊಂಡೂಸ್ಕರ್ ಇತರರಿದ್ದರು.
Laxmi News 24×7