ಬೆಳಗಾವಿ : ಕಾಂಗ್ರೆಸ್ ಮತ್ತು ಜೆಡಿಎಸ್ ಶಾರ್ಟ್ ಕಟ್ ಆಡಳಿತದ ಬಗ್ಗೆ ಎಚ್ಚರಿಕೆ ಇರಬೇಕು. ಪಕ್ಷ ಬದಲಾದರೂ ಎರಡೂ ಒಂದೇ ನಾಣ್ಯದ ಎರಡು ಮುಖಗಳು.
ಕಾಂಗ್ರೆಸ್ ನಂತೆ ಜೆಡಿಎಸ್ ಕೂಡ ಒಡೆದು ಆಳುವ ನೀತಿ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದರು. ಬೈಲಹೊಂಗಲ ಮತಕ್ಷೇತ್ರದ ಬೈಲವಾಡದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಸವದತ್ತಿ, ರಾಮದುರ್ಗ, ಖಾನಾಪುರ, ಗೋಕಾಕ್, ಅರಭಾವಿ, ಯಮಕನಮರಡಿ, ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ, ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಶಾರ್ಟ್ ಕಟ್ ನೀತಿ ಬೇಡ : ಶಾರ್ಟ್ ಕಟ್ ರಾಜಕೀಯದಿಂದ ಎಂದಿಗೂ ಅಭಿವೃದ್ಧಿ ಸಾಧ್ಯವಿಲ್ಲ. ವಿಶೇಷವಾಗಿ ರಾಜ್ಯದ ಯುವ ಜನತೆ ಶಾರ್ಟ್ ಕಟ್ ನೀತಿಯಿಂದ ತಮ್ಮ ಜೀವನ ಶಾರ್ಟ್ ಮಾಡಿಕೊಳ್ಳಬಾರದು. ಶಾರ್ಟ್ ಕಟ್ ರಾಜಕೀಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಒಂದಿಷ್ಟು ಲಾಭ ಆಗಿರಬಹುದು. ಆದರೆ ಜನಸಾಮಾನ್ಯರಿಗೆ ಹಾನಿಯೇ ಹೆಚ್ಚು. ಶಾರ್ಟ್ ಕಟ್ ನೀತಿ ಬದಲಾಯಿಸಿ ವಿಕಾಸ ಯೋಜನೆಗೆ ಬಿಜೆಪಿ ಮನ್ನಣೆ ನೀಡುತ್ತಿದೆ. ಆದರೆ ಈಗಿನ ಯುವಕರು ಶಾರ್ಟ್ ಕಟ್ ಪಕ್ಷಗಳಿಗೆ ಅಧಿಕಾರ ಕೊಡುವುದಿಲ್ಲ. ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸದಿಂದ ಶಾರ್ಟ್ ಕಟ್ ರಾಜಕೀಯದಿಂದ ದೂರ ಇರೋ ತೀರ್ಮಾನ ಮಾಡಿದೆ. ಎಲ್ಲರಿಗೂ ಯೋಜನೆ ತಲುಪಬೇಕು ಎನ್ನುವುದು ನಮ್ಮ ನಿರ್ಧಾರ. ರಾಜ್ಯದಲ್ಲಿ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ತೀರ್ಮಾನ ಮಾಡಿದೆ. ಒಗ್ಗಟ್ಟು ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.