ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಜನರಿಗೆ ದಿನಸಿ ಕಿಟ್ ವಿತರಿಸಲು ಪೆಟ್ರೋಲ್ ಬಂಕ್ ಹಾಗೂ ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಬ್ಯಾಂಕಿನಲ್ಲಿ ಅಡ ಇಟ್ಟಿದ್ದಾರೆ.
ತಮ್ಮ ಕ್ಷೇತ್ರದ ಜನರಿಗೆ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ಪಡಿತರ ಕಿಟ್ ಹಾಗೂ ತರಕಾರಿ ವಿತರಿಸಿದ್ದಾರೆ. ರೈತರಿಂದ ಒಂದೂವರೆ ಕೋಟಿ ರೂಪಾಯಿಯಷ್ಟು ತರಕಾರಿ ಖರೀದಿ ಮಾಡಿದ್ದಾರೆ. ರೈತರಿಗೆ ಈ ತಿಂಗಳ 18ರ ಒಳಗೆ ಹಣ ಕೊಡುವ ಮಾತು ಕೊಟ್ಟಿದ್ದಾರೆ. ಆದರೆ ಯಾರಿಂದಲೂ ಈ ವೇಳೆ ಇಷ್ಟು ಪ್ರಮಾಣದ ಹಣ ಕೈ ಸಾಲ ಸಿಗದ ಕಾರಣ ಪೆಟ್ರೋಲ್ ಬಂಕ್ ಹಾಗೂ ಮನೆಯನ್ನು ಕೆ.ಆರ್. ನಗರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಅಡ ಇಟ್ಟು ಸಾಲ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಸಾರಾ ಮಹೇಶ್, ಕೊರೊನಾ ಬಂದಾಗಿನಿಂದ ಜನರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿದೆ ಸುಮಾರು 72 ಸಾವಿರ ಕುಟುಂಬವಿದೆ. ಅದರಲ್ಲಿ ಬಿಪಿಎಲ್ ಕಾರ್ಡ್ ಇಲ್ಲದೆ ಇರುವವರು 10 ಸಾವಿರ ಕುಟುಂಬಗಳಿವೆ. ಆದರೆ ನಾವು ಕಾರ್ಡ್ ಇರಲಿ, ಇಲ್ಲದೆ ಇರಲಿ ಪ್ರತಿ ಕುಟುಂಬದವರಿಗೂ ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. ಜೊತೆ ಎರಡು ಬಾರಿ ತರಕಾರಿ ಹಂಚಿದ್ದೇವೆ ಎಂದರು.
ಕೊರೊನಾದಿಂದ ತರಕಾರಿ ಬೆಳೆದ ರೈತರು ತುಂಬಾ ಕಷ್ಟ ಎದುರಿಸುತ್ತಿದ್ದಾರೆ. ರೈತರಿಂದ ಸುಮಾರು 15 ಸಾವಿರ ಟನ್‍ನಷ್ಟು ತರಕಾರಿ ಖರೀದಿಸಿದ್ದೇವೆ. ಅವರಿಗೆ 18 ರಂದು ಹಣ ಕೊಡುತ್ತೇನೆ ಎಂದು ಹೇಳಿದ್ದೆ. ರೈತರಿಂದ ಖರೀದಿಸಿರುವ ಬೆಳೆಗೆ ಸುಮಾರು 1.5ಕೋಟಿ ಹಣ ಕೊಡಬೇಕು. ಈ ಬಗ್ಗೆ ನಮ್ಮ ಸ್ನೇಹಿತರಿಗೆ ಹೇಳಿದೆ ಅವರು ತಕ್ಷಣ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು
ಇದುವರೆಗೂ ರೈತರಿಗೂ ಸೇರಿದಂತೆ 5.5 ಕೋಟಿ ಖರ್ಚಾಗಿದೆ. ನಾವು 3.5 ಕೋಟಿ ಆಗುತ್ತೆ ಎಂದು ಅಂದಾಜು ಮಾಡಿದ್ದೆ. ನಾವು ಹುಟ್ಟಿದಾಗಿನಿಂದ ಶ್ರೀಮಂತರಲ್ಲ. ಆದರೆ ನಮ್ಮ ದೇಶಕ್ಕೆ ಕೊರೊನಾ ಅನಿರೀಕ್ಷಿತವಾಗಿ ಬಂದಿದೆ. ಇಲ್ಲಿವರೆಗೂ ನಮಗೆ ಸುಮಾರು 10 ಕೋಟಿ ಸಾಲ ಇದೆ. ಆದರೆ ಈಗ ಅನಿರೀಕ್ಷಿತವಾಗಿ 5.5 ಕೋಟಿ ಸಾಲ ಆಗಿದೆ. ಅದರಲ್ಲಿ ಸ್ವಲ್ಪ ಸ್ನೇಹಿತರು ಕೊಟ್ಟಿದ್ದಾರೆ. ಉಳಿದನ್ನು ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದೇನೆ.
ಬೇರೆ ಸಮಯದಲ್ಲಿ ಸಾಲ ಕೇಳಿದ್ದರೆ ಸ್ನೇಹಿತರು ಕೊಡುತ್ತಿದ್ದರು. ಆದರೆ ಕೊರೊನಾ ಸಂದರ್ಭದಲ್ಲಿ ಯಾರು ಕೊಡಲ್ಲ. ಅವರಿಗೆ ಮುಂದೆ ಯಾವ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿಲ್ಲ. ಕೊನೆಗೆ ರೈತರಿಗೆ ಕೊಡಬೇಕಾದ 1.5 ಕೋಟಿಯನ್ನು ಸಾಲ ಮಾಡಬೇಕಾಯಿತು. ಬೇರೆ ಯಾವ ಉದ್ದೇಶಕ್ಕೆ ಮಾಡಿದ್ದರೆ ಬೇಸರವಾಗುತ್ತದೆ. ಆದರೆ ನಮಗೆ ವೋಟು ಹಾಕಿ, ಗೆಲ್ಲಿಸಿ ಅಧಿಕಾರಿ ಕೊಟ್ಟು ಜವಾಬ್ದಾರಿ ಕೊಟಿದ್ದಾರೆ. ಅವರ ಊರಿಗೆ ಹೋದಾಗ ಹಾರ ಹಾಕಿ ಪ್ರೀತಿ-ಗೌರವ ಕೊಟ್ಟಿದ್ದಾರೆ. ಅಂತವರ ಋಣ ತೀರಿಸಲು ಒಂದು ಅವಕಾಶ ಸಿಕ್ಕಿದೆ. ಇದು ಅಳಿಲು ಸೇವೆ ಅಷ್ಟೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಸಾರಾ ಮಹೇಶ್ ಹೇಳಿದರು.