ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಮುಖಂಡರ ನಡುವಿನ ವಾಕ್ಸಮರವೂ ದಿನದಿಂದ ದಿನಕ್ಕೆ ಜೋರಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಚಿತ್ರನಟ ಕಿಚ್ಚ ಸುದೀಪ್ ಅವರು ಬೊಮ್ಮಾಯಿ ಅವರಿಗೆ ಸಾಥ್ ನೀಡಿದ್ದರು.
ಇದೇ ವೇಳೆ, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಜೆ.ಪಿ.ನಡ್ಡಾ, ‘ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು. ಮತ ಹಾಕದಿದ್ದರೆ ಮೋದಿಯ ಆರ್ಶೀವಾದದಿಂದ ತಪ್ಪಿಸಿಕೊಳ್ಳುವಿರಿ’ ಎಂದು ಹೇಳಿಕೆ ನೀಡಿದ್ದರು.
ನಡ್ಡಾ ಹೇಳಿಕೆ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಾಜ್ಯದ ಮತದಾರರಿಗೆ ಬೆದರಿಕೆ ಹಾಕಿದ ನಡ್ಡಾ ಅವರೇ, ಆಶೀರ್ವದಿಸಲು ಮೋದಿ ಏನು ದೇವರಾ, ಮಠಾಧೀಶರಾ ಅಥವಾ ಛೂ ಮಂತರ್ ಬಾಬಾನಾ’ ಎಂದು ಪ್ರಶ್ನಿಸಿದೆ.
ಬಿಜೆಪಿಗರೇ, ಕನ್ನಡಿಗರ ತೆರಿಗೆ ಭಿಕ್ಷೆಯಲ್ಲಿ ಗತ್ತು, ಗಮ್ಮತ್ತು, ಶೋಕಿ ಮಾಡುತ್ತಿರುವ ಮೋದಿಯೇ ಕನ್ನಡಿಗರಿಗೆ ಋಣಿಯಾಗಿರಬೇಕು ಅಲ್ಲವೇ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿ, ಕನ್ನಡಿಗರನ್ನು ಅವಮಾನಿಸಿದ ಬಿಜೆಪಿ ಅಧ್ಯಕ್ಷ ನಡ್ಡಾ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. ‘ಮತ ಹಾಕದಿದ್ದರೆ ಮೋದಿಯ ಆಶೀರ್ವಾದವಿಲ್ಲ’ ಎಂದು ಒಕ್ಕೂಟ ವ್ಯವಸ್ಥೆಯ ಗೌರವವನ್ನು ಗಾಳಿಗೆ ತೂರಿ, ಕನ್ನಡಿಗರನ್ನು ಗುಲಾಮರಂತೆ ಕಾಣುವ ಬಿಜೆಪಿಯನ್ನು ರಾಜ್ಯದಿಂದ ಒದ್ದೋಡಿಸಬೇಕು ಎಂದು ಕಾಂಗ್ರೆಸ್ ಕಿಡಿಕಾಡಿದೆ.
Laxmi News 24×7