Breaking News

ಕಡೂರು| ವೈ.ಎಸ್.ವಿ‌. ದತ್ತ ಮರಳಿ ಜೆಡಿಎಸ್‌ಗೆ

Spread the love

ಡೂರು: ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಯಗಟಿಯ ಮನೆಗೆ ಗುರುವಾರ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದು, ಅವರ ಸನ್ಮುಖದಲ್ಲಿ ದತ್ತ ಅವರು ಮತ್ತೆ ಜೆಡಿಎಸ್‌ಗೆ ಮರಳಿದರು.

ಯಗಟಿಯ ಅವರ ಮನೆಯಲ್ಲಿ ಸೇರಿದ್ದ ಸಾವಿರಾರು ಜನರ ಉಪಸ್ಥಿತಿಯಲ್ಲಿ ಸಂಸದ ಪ್ರಜ್ವಲ್ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಕೇವಲ ದತ್ತಣ್ಣ ಅವರನ್ನು ನಂಬಿಸಿ ಮೋಸ ಮಾಡಿಲ್ಲ.

ಅವರ ಅಭಿಮಾನಿಗಳಿಗೂ ಮೋಸ ಮಾಡಿದೆ. ಇದನ್ನು ಈ ಹಿಂದೆಯೇ ದತ್ತ ಅವರಿಗೆ ಹೇಳಿದ್ದೆ. ಆದರೆ ಹಲವಾರು ಘಟನೆಗಳು ನಡೆದುಹೋದವು. ದತ್ತ ಅವರು ನೋವು ಅನುಭವಿಸಿದ್ದಾರೆ. ಅವರು ದೂರ ಹೋದಾಗ ನಮಗೂ ನೋವಾಯಿತು. ಈಗ ಅವೆಲ್ಲವನ್ನು ಮರೆತು ದತ್ತ ಅವರನ್ನು ನಾವೆಲ್ಲ ಮತ್ತೆ ಪಕ್ಷಕ್ಕೆ ಸ್ವಾಗತಿಸಿದ್ದೇವೆ. ನಾವೆಲ್ಲ ನಿರ್ಧಾರ ಮಾಡಿದ್ದೇವೆ. ನಾವು,ನಮ್ಮ ಕುಟುಂಬ, ಪಕ್ಷ ದತ್ತ ಅವರ ಜತೆ ಇದ್ದೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಇದೇ ಸಂಬಂಧ ಶಾಶ್ವತವಾಗಿ ಉಳಿಸಿಕೊಳ್ಳೋಣ. ದೇವೇಗೌಡರ ಮಾರ್ಗದರ್ಶನದಂತೆ ದತ್ತ ಅವರನ್ನು ನಾವೆಲ್ಲರೂ ಸೇರಿ ಉಳಿಸಿಕೊಳ್ಳುತ್ತೇವೆ. ದತ್ತ ಅಭಿಮಾನಿಗಳು ನಂಬಿಕೆಯಿಟ್ಟು ಪಕ್ಷಕ್ಕೆ ಕಳಿಸಿಕೊಡಿ. ದತ್ತ ಅವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ’ ಎಂದರು.

ವೈ.ಎಸ್.ವಿ‌.ದತ್ತ ಮಾತನಾಡಿ, ‘ನನ್ನ ಸ್ಪರ್ಧೆಯ ಬಗ್ಗೆ ನಿರ್ಧಾರ ಮಾಡುವವರು ಅಭಿಮಾನಿಗಳು‌ ಅವರ ನಿರ್ಧಾರವೇ ನನ್ನ ನಡೆ’ ಎಂದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ‘ಕಡೂರು ಕ್ಷೇತ್ರದ ಮೇಲೆ ದೇವೇಗೌಡರಿಗೆ ಬಹಳ ಅಭಿಮಾನ. ಜೆಡಿಎಸ್ ಪಕ್ಷದ ಬೆಳವಣಿಗೆಯಲ್ಲಿ ದತ್ತ ಅವರ ಪಾಲೇನು ಎಂಬುದನ್ನು ನಾವೆಲ್ಲರೂ ಬಲ್ಲೆವು. ಸ್ವಂತ ದೇವೇಗೌಡರು ದತ್ತ ಅವರನ್ನು ಕೈಬಿಡಬಾರದು ಎಂದು ಹೇಳಿದ್ದಾರೆ. ಚುನಾವಣೆಗೆ ಸಮಯ ಹೆಚ್ಚಿಲ್ಲ. ಕಡೂರಿನಲ್ಲಿ ದತ್ತ ಅವರೇ ಜೆಡಿಎಸ್ ಅಭ್ಯರ್ಥಿಯಾಗಬೇಕೆಂದು ಎಲ್ಲರೂ ಒಮ್ಮತದ ನಿರ್ಣಯ ಮಾಡಿ, ಜನತೆ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ದತ್ತ ಅವರು ನಮ್ಮೆಲ್ಲರನ್ನೂ ದೂರ ಮಾಡುವುದು ಬೇಡ. ಕುಮಾರಸ್ವಾಮಿ ಅವರೂ ಸಹ ದತ್ತ ಅವರ ಬಗ್ಗೆ ಯಾವುದೇ ರೀತಿ ಅಪಸವ್ಯದ ಮಾತನಾಡಿಲ್ಲ. ನಮ್ಮ ಇಡೀ ಕುಟುಂಬಕ್ಕೆ ದತ್ತ ಅವರ ಬಗ್ಗೆ ಗೌರವವಿದೆ. ನೆನ್ನೆ ದತ್ತ ಅವರ ಜೊತೆ ಮಾತನಾಡಿದ ನಂತರ ಗೌಡರು ಬಹಳ ಗೆಲುವಾಗಿದ್ದಾರೆ. ಇದೇ ಬಾಂಧವ್ಯ ಮುಂದುವರೆಯಲಿ. ದತ್ತ ಅವರು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಖುದ್ದಾಗಿ ಹಾಜರಿರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಎಂದು ಸಂಸದ ಪ್ರಜ್ವಲ್ ಹೇಳಿದರು.

‘ನಿನ್ನನ್ನು ಪಕ್ಷೇತರವಾಗಿ ಚುನಾವಣೆಗೆ ನಿಲ್ಲಿಸಲು ನಾನಿನ್ನೂ ಸತ್ತಿಲ್ಲ ಎಂದು ದೇವೇ ಗೌಡರು ಹೇಳಿ ನೀನು ಜೆಡಿಎಸ್‌ನಿಂದಲೇ ಸ್ಪರ್ದಿಸು ಎಂದಾಗ ನಾನು, ಇಲ್ಲ ಗೌಡರೇ ಅಭಿಮಾನಿಗಳು ಒಪ್ಪುವುದಿಲ್ಲ ಎಂದೆ. ಗೌಡರು ನಾಳೆಯೇ ರೇವಣ್ಣ ಮತ್ತು ಪ್ರಜ್ವಲ್ ಇಬ್ಬರೂ ನಿಮ್ಮನೆಗೇ ಬಂದು ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ನಾಮಪತ್ರ ಸಲ್ಲಿಸುವಾಗ ನಾನು ಮಾಜಿ ಪ್ರಧಾನಿಯಾಗಿ ಅಲ್ಲ, ಮಗ ನಾಮಪತ್ರ ಸಲ್ಲಿಸುತ್ತಾನೆಂದು ಬರುವೆ ಎಂದಿದ್ದಾರೆ. ದೇವೇಗೌಡರು ಮತ್ತು ನನ್ನ ನಡುವಿನ ಸಂಬಂದ ರಾಜಕೀಯವನ್ನು ಮೀರಿದ್ದು’ ಎಂದು ದತ್ತ ಭಾವುಕರಾದರು.

‘ಜೆಡಿಎಸ್ ಪಕ್ಷವನ್ನು ಕಟ್ಟುವಲ್ಲಿ ದತ್ತ ಅವರ ಪಾತ್ರ ಮುಖ್ಯವಾದುದು. ನಡುರಾತ್ರಿಯಲ್ಲಿಯೂ ದತ್ತ ಅವರನ್ನು ದೇವೇಗೌಡರು ಕರೆಸಿಕೊಂಡು ಚರ್ಚೆ ಮಾಡುತ್ತಿದ್ದರು. ಬುದ್ದಿವಂತ ಸಮಾಜವಾದ ಬ್ರಾಹ್ಮಣರನ್ನು ಜೊತೆಗಿಟ್ಟುಕೊಳ್ಳಬೇಕೆಂಬುದು ನಮ್ಮ ಆಸೆಯೂ ಹೌದು’ ಎಂದು ರೇವಣ್ಣ ಚಟಾಕಿ ಹಾರಿಸಿದರು.

ವೈ.ಎಸ್.ವಿ ದತ್ತ ಅವರು ಇತ್ತೀಚೆಗಷ್ಟೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ನಂತರ ಕೆ.ಎಸ್.ಆನಂದ್ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಸಮಾಧಾನಗೊಂಡು ಪಕ್ಷೇತರವಾಗಿ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದರು. ಬುಧವಾರ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು‌. ಅಗಲೇ ದತ್ತ ಅವರು ಮತ್ತೆ ಜೆಡಿಎಸ್ ಗೆ ವಾಪಸ್ಸಾಗುತ್ತಾರೆ. ಕಡೂರಿನಿಂದ ಜೆಡಿಎಸ್‌ನಿಂದಲೇ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಅದೀಗ ನಿಜವಾಗಿದೆ. ರೇವಣ್ಣ ಮತ್ತು ಪ್ರಜ್ವಲ್ ದತ್ತ ಅವರನ್ನು ಭೇಟಿ ಮಾಡುವುದರೊಂದಿಗೆ ಕಡೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ದತ್ತ ಸ್ಪರ್ಧಿಸುವುದು ಖಚಿತವಾಗಿದೆ.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರೇಂ ಕುಮಾರ್, ಬಿ.ಟಿ.ಗಂಗಾಧರ ನಾಯ್ಕ, ಎಸ್.ವಿ.ಉಮಾಪತಿ, ವೈ.ಎಸ್.ರವಿಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ, ಶೂದ್ರ ಶ್ರೀನಿವಾಸ್, ಗಂಗರಾಜು, ವಾಸು ಇದ್ದರು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ