ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ನೂತನ ಸಂಸತ್ ಭವನಕ್ಕೆ ದಿಢೀರ್ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು ಹಾಗೂ ಕಟ್ಟಡ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.ಕಟ್ಟಡದೊಳಗೆ ಪ್ರಧಾನಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಮೋದಿ ಅವರು ಸಂಸತ್ತಿನ ಉಭಯ ಸದನಗಳಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು. ಕಟ್ಟಡ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಕಳೆದ ವರ್ಷ ನವೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದ ನೂತನ ಕಟ್ಟಡ ಶೀಘ್ರದಲ್ಲೇ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
2020 ರ ಡಿಸೆಂಬರ್‌ನಲ್ಲಿ, ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಸಂಸತ್ ಭವನದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಮಾಡಿದ್ದರು. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಗೆ 2020 ರಲ್ಲಿ 971 ಕೋಟಿ ರೂ.ಗೆ ಯೋಜನೆಯನ್ನು ನೀಡಿದ ನಂತರ ಕಟ್ಟಡ ನಿರ್ಮಿಸಲಾಗುತ್ತಿದೆ. ಆದಾಗ್ಯೂ, ಯೋಜನಾ ವೆಚ್ಚವು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಹೊಸ ಕಟ್ಟಡವು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಭವನ, ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶ ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿರುತ್ತದೆ.
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ, ಸರಕಾರವು ಕಾರ್ಯನಿರ್ವಾಹಕ ಎನ್‌ಕ್ಲೇವ್ ಅನ್ನು ಸಹ ನಿರ್ಮಿಸುತ್ತದೆ, ಅದು ಹೊಸ ಪ್ರಧಾನ ಮಂತ್ರಿ ಕಚೇರಿ (PMO), ಕ್ಯಾಬಿನೆಟ್ ಸೆಕ್ರೆಟರಿಯೇಟ್, ಇಂಡಿಯಾ ಹೌಸ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯವನ್ನು ಹೊಂದಿರುತ್ತದೆ.