ಮೈಸೂರು: ಬೆಂಗಳೂರು- ಮೈಸೂರು ಹೈವೇಯನ್ನು ಮೋದಿ ಅಪ್ಪನ ಮನೆಯಿಂದ ಹಣ ತಂದು ನಿರ್ಮಾಣ ಮಾಡಿಲ್ಲ. ಪ್ರತಾಪ್ ಸಿಂಹ ಅಪ್ಪನ ಮನೆಯಿಂದ ಹಣ ತಂದು ಮಾಡಿಲ್ಲ. ಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಲಾಗಿದೆ. ಆದರೂ ಹೈವೇಗೆ ದುಬಾರಿ ಟೋಲ್ ನಿಗದಿ ಮಾಡಿರೋದು ಸರಿಯಲ್ಲ ಎಂದು ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕಿಡಿಕಾರಿದರು.
ಬೆಂಗಳೂರು ಮೈಸೂರು ಹೈವೇ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೈವೇ ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಜನರಿಗೆ ತೀವ್ರ ತೊಂದರೆಯಾಗಿದೆ. ಹೈವೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪ್ರಧಾನಿ ನರೇಂದ್ರಮೋದಿ ಬಂದು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ತಾವು ಹೇಳಿದ್ದೇ ಸರಿ, ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಹೈವೇ ಕಾಮಗಾರಿ ನೆಪದಲ್ಲಿ ಲೂಟಿ ಮಾಡಿದ್ದಾರೆ. 200 ಹೋಟೆಲ್, 90 ಪೆಟ್ರೋಲ್ ಬಂಕ್ ಗಳು ಬಂದ್ ಆಗಿವೆ. ಬಿಜೆಪಿಯವರು ಬಡ ಜನರ ಜೀವನದ ಜೊತೆ ಚೆಲ್ಲಾಟವಾಡ್ತಿದಾರೆ ಎಂದರು.
ಮೋದಿ ದೆಹಲಿಯಲ್ಲಿ ಚನ್ನಪಟ್ಟಣದ ಬೊಂಬೆ ಹಿಡಿದು ಕುಳಿತು ಈ ಬೊಂಬೆಗಳನ್ನು ವಿಶ್ವಕ್ಕೆ ಮುಟ್ಟಿಸುತ್ತೇವೆ ಎಂದಿದ್ದರು. ಆದರೆ ಹೈವೆ ನಿರ್ಮಾಣದಿಂದ ಚನ್ನಪಟ್ಟಣದ ಬೊಂಬೆ ಕಥೆ ಏನಾಯಿತು? ಬೊಂಬೆ ಹೇಳುತೈತೇ ಎಂದು ಉಲ್ಲೇಖಿಸುತ್ತಾ ಕೇಂದ್ರ ಸರ್ಕಾರ ಹಾಗು ಬಿಜೆಪಿ ವಿರುದ್ದ ಎಚ್ ವಿಶ್ವನಾಥ್ ಹರಿಹಾಯ್ದರು.