ರಾಯಬಾಗ: ‘ಇಂದಿನ ದಿನಗಳಲ್ಲಿ ಗುರು- ಶಿಷ್ಯರ ಸಂಬಂಧಗಳು ಕದಡುತ್ತಿವೆ. ಶಿಕ್ಷಕರಿಲ್ಲದೇ ತಂತ್ರಜ್ಞಾನದ ಮುಖಾಂತರ ಜ್ಞಾನ ಸಂಪಾದನೆ ಸಾಧ್ಯ ಎನ್ನುವ ಭಾವನೆಯೇ ಇದಕ್ಕೆ ಕಾರಣ. ಆದರೆ, ವಿದ್ಯಾರ್ಥಿಗಳಲ್ಲಿ ತಾಳ್ಮೆ, ವಿನಯ, ಭಕ್ತಿಭಾವ ಮೂಡಲು ಸಾಧ್ಯವಿಲ್ಲ.
ಅದಕ್ಕೆ ಗುರುವೇ ಬೇಕು’ ಎಂದು ವಿಜಯಪುರ ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ವಿಷ್ಣು ಶಿಂಧೆ ಹೇಳಿದರು.
ಪ್ರೊ.ಯಲ್ಲಪ್ಪ ಹಿಮ್ಮಡಿ ಅವರ ಸೇವಾ ನಿವೃತ್ತ ಪ್ರಯುಕ್ತ ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಚಾರ ಸಮರ್ಪಣೆ, ಗುರುವಿಗೆ ವಂದನೆ, ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬೆರಳ ತುದಿಯಲ್ಲೇ ಸಮಗ್ರ ಜ್ಞಾನ ಸಿಗುತ್ತಿದೆ. ಆದರೆ, ಮಾದಕ ವಸ್ತುಗಳ ಸೇವನೆ ಹಾಗೂ ಮನೋ ದಾರಿದ್ರ್ಯ ಹೆಚ್ಚಾಗಿ ವಿದ್ಯಾರ್ಥಿಗಳು ಬದುಕು ನಾಶ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹೊರಬರಲು ಗುರುವಿನ ಮಾರ್ಗದರ್ಶನ ಅಗತ್ಯ’ ಎಂದರು.
ಉಪನ್ಯಾಸಕ ಕೆ.ಎನ್. ದೊಡಮನಿ ಮಾತನಾಡಿ, ‘ಹಿಮ್ಮಡಿ ಅವರು ನನ್ನಂತೆ ಹಲವರಿಗೆ ಪ್ರೇರಣಾದಾಯಿ ಆದವರು. ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವಲ್ಲಿ ಅವರು ಸದಾ ಮುಂದೆ. ಉತ್ತಮ ವಾಗ್ಮಿ, ಸ್ಫೂರ್ತಿಯ ಚಿಲುಮೆ ಆಗಿದ್ದಾರೆ’ ಎಂದರು.
ಹಿಮ್ಮಡಿ ದಂಪತಿಯನ್ನು ಸನ್ಮಾನಿಸಲಾಯಿತು. ಬೆಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ರಾಜಪ್ಪ ದಳವಾಯಿ, ಶಿವರುದ್ರ ಕಲ್ಲೊಳಿಕರ, ಬಸವ ಬೆಳವಿಯ ಶರಣಬಸವ ದೇವರು, ಈರಣ್ಣ ಬೆಟಗೇರಿ, ವಿಜಯಮಾಲಾ ನಾಗನೂರಿ, ಸುಪ್ರಿಯಾ ಕಾಂಬಳೆ, ರಾಜು ಸನದಿ ಹಲವರು ಇದ್ದರು.