ಬಳ್ಳಾರಿ : ಬಡ ಜನರ ಕಲ್ಯಾಣವೇ ಸರ್ಕಾರದ ಗುರಿಯಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ನೇರವಾಗಿ ತಲುಪುವಂತೆ ಮಾಡಲಾಗಿದೆ. ಇದು ಬಡಸಮರ್ಪಿತ ಸರ್ಕಾರವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು.
ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಸೋಂಕನ್ನು ಹಿಮ್ಮೆಟ್ಟಿಸುವಲ್ಲಿ ಕೋವಿಡ್ ಲಸಿಕೆಯನ್ನು ಕಂಡುಹಿಡಿಯಲಾಯಿತು. 230 ಕೋಟಿ ವ್ಯಾಕ್ಸಿನ್ ತಯಾರಿಸಿ ಕೇಂದ್ರ ಸರ್ಕಾರವು ದೇಶದಲ್ಲಿನ ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಿದ್ದರಿಂದ ಕೋವಿಡ್ ಸಂಕಷ್ಟದಿಂದ ಹೊರಬಂದಿದೆ. ಇಂದು ನಾವೆಲ್ಲ ಮಾಸ್ಕ್ ಇಲ್ಲದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುವಂತಾಗಿದೆ. ಉಚಿತ ವ್ಯಾಕ್ಸಿನ್ ನೀಡಿದ್ದರಿಂದ ದೇಶ ಸಧೃಡವಾಗಿದೆ ಎಂದರು.
2017ರಲ್ಲಿ ದೇಶದಲ್ಲಿ 3 ಕೋಟಿ ಹೊಂದಿದ್ದ ನಳ ಸಂಪರ್ಕಗಳು, ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಿಂದ ದೇಶದ 11 ಕೋಟಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊದಲ ಕಂತಿನ ಹಣವನ್ನು ಒಂದು ಬಟನ್ ಒತ್ತುವ ಮೂಲಕ 8 ಕೋಟಿ ಜನ ರೈತರ ಖಾತೆಗೆ ಏಕಕಾಲದಲ್ಲಿ ಹಣ ಜಮೆಯಾಗಿದೆ ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1ಕೋಟಿ 22 ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದೆ. ಪ್ರಧಾನಮಂತ್ರಿಗಳು 42 ಲಕ್ಷ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಮಂಜೂರಾತಿಯನ್ನು ಮಾಡಲಾಗಿದೆ. ರಾಜ್ಯದಲ್ಲಿ 2,30,48,322 ರೂ. ಸಾಲ ಮಂಜೂರಾತಿ ಮಾಡಲಾಗಿದೆ ಎಂದು ತಿಳಿಸಿದರು.
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಜಿಲ್ಲೆಯಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವುದರ ಜೊತೆಗೆ ಸರ್ಕಾರದ ಯೋಜನೆಗಳನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ.
25,54,125 ಫಲಾನುಭವಿಗಳು, 1649.73 ಕೋಟಿ ಅನುದಾನ: ಜಿಲ್ಲೆಯಲ್ಲಿ 25,54,125 ಲಕ್ಷ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯ ಸಿಕ್ಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ 1649.73 ಕೋಟಿ ರೂ. ಅನುದಾನ ಒದಗಿಸಿದೆ ಎಂದು ತಿಳಿಸಿದರು.
ಮೀಸಲಾತಿ ಹೆಚ್ಚಳದಲ್ಲಿ ನಮ್ಮ ಸರ್ಕಾರವು ದಿಟ್ಟ ನಿರ್ಧಾರ ಕೈಗೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಿಸಿ ಆದೇಶ ಹೊರಡಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಅವಶ್ಯಕವಾಗಿರುವ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಪರಿಶಿಷ್ಟ ಜಾತಿಗೆ ಶೇ.15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ ಎಂದರು.
ರಾಜ್ಯದ ಜನರು ಶಸಕ್ತವಾಗುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಒಟ್ಟು 10 ಸಾವಿರ ರೂ.ಗಳನ್ನು ವರ್ಷಕ್ಕೆ ಮೂರು ಕಂತುಗಳಲ್ಲಿ ರೈತರಿಗೆ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ರೂಪಿಸಿದ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಸದುದ್ದೇಶವನ್ನು ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗವೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಯಾವುದೇ ಮಧ್ಯಂತರ ವ್ಯಕ್ತಿಗಳಿಲ್ಲದೇ ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸುವುದೇ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿತಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದಲ್ಲಿನ ಪ್ರತಿಯೊಬ್ಬ ಮಹಿಳೆಗೆ ಹೊಗೆ ಮುಕ್ತ ಮಾಡಲು ಉಜ್ವಲ ಯೋಜನೆಯಡಿ 9 ಕೋಟಿ ಮನೆಗಳಿಗೆ ಗ್ಯಾಸ್ ಅಡುಗೆ ಅನಿಲಗಳನ್ನು ವಿತರಿಸಲಾಗಿದೆ. ಅದೇರೀತಿಯಾಗಿ ರಾಜ್ಯ ಸರ್ಕಾರವು ಮಾತೃ ವಂದನಾ ಯೋಜನೆ, ಸ್ತ್ರೀಶಕ್ತಿ ಯೋಜನೆ ಹಾಗೂ ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲು ಬಜೆಟ್‍ನಲ್ಲಿ ಘೋಷಿಸಿದ್ದಾರೆ ಎಂದರು