ಬೆಂಗಳೂರು: ಲಂಚ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ಯಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾಡಾಳು ವಿರೂಪಾಕ್ಷಪ್ಪ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ವಕೀಲರು ಮನವಿ ಮಾಡಿದರು.
ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠವು ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ರಾಜ್ಯ ಬಂದ್ ಗೆ ಕಾಂಗ್ರೆಸ್ ಕರೆ
ಇತ್ತ ವಿರೂಪಾಕ್ಷಪ್ಪ ಅವರ ಬಂಧನ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಶನಿವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಿತ್ತು. ಈಗ ಮಾರ್ಚ್ 9ರಂದು 2 ತಾಸುಗಳ ಕಾಲ ರಾಜ್ಯ ಬಂದ್‌ಗೆ ಕಾಂಗ್ರೆಸ್ ಕರೆ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಬೆಳಗ್ಗೆ 9ರಿಂದ 11ರ ವರೆಗೆ ರಾಜ್ಯಾದ್ಯಂತ ವ್ಯಾಪಾರ- ವಹಿವಾಟು, ಉದ್ಯಮ ಮತ್ತಿತರ ಚಟುವಟಿಕೆಗಳನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ. ಸಾರಿಗೆ ವ್ಯವಸ್ಥೆ, ಆಸ್ಪತ್ರೆಗಳ ಸೇವೆಯಲ್ಲಿ ವ್ಯತ್ಯಯ ಆಗುವುದಿಲ್ಲ. ಶಾಲಾ-ಕಾಲೇಜುಗಳು ಕೂಡ ಎಂದಿನಂತೆ ಇರಲಿವೆ ಎಂದೂ ಹೇಳಿದೆ.