ಚಿಕ್ಕೋಡಿ: ‘ಸುಮಂಗಲಮ್ ಪಂಚಮಹಾಭೂತ ಲೋಕೋತ್ಸವ ಕೇವಲ ಉತ್ಸವವಾಗದೇ, ಇಲ್ಲಿ ಆಲಿಸಿದ, ವೀಕ್ಷಿಸಿದ ಎಲ್ಲ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಮತೋಲನ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸಬೇಕು’ ಎಂದು ಕೊಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಮಠದಲ್ಲಿ ಭಾನುವಾರ ಉತ್ಸವದ ಸಮಾರೋಪದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಮನುಷ್ಯನಿಗಿಂತ ಮರೆಗುಳಿತನ ಹೊಂದಿರುವ ಜೀವಿ ಇನ್ನೊಂದಿಲ್ಲ. ವಿನಾಶ ಕಾಲ ಸಮೀಪಿಸುತ್ತಿದೆ ಎಂಬುದು ಮನುಕುಲ ಮರೆತರೆ ಮುಂದೊಂದು ದಿನ ಇಡೀ ಜೀವ ಸಂಕುಲವೇ ವಿನಾಶವಾಗಲಿದೆ’ ಎಂದರು.
‘ಮಣ್ಣಿನ ಸತ್ವ ಕ್ಷೀಣಿಸುತ್ತಿದೆ. ಕೃಷಿಕರು ಪ್ರತಿ ವರ್ಷ ಬೆಳೆ ಬದಲಾಯಿಸಬೇಕು. ಜೈವಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಪಟ್ಟಣವಾಸಿಗಳೂ ಪ್ರತಿ ಮನೆಯಲ್ಲೂ ಕನಿಷ್ಠ ಐದು ಗಿಡಗಳನ್ನಾದರೂ ಪೋಷಿಸಬೇಕು. ಪ್ರತಿ ವಿದ್ಯಾರ್ಥಿ ಒಂದು ಗಿಡ ಬೆಳೆಸಬೇಕು. ಶಾಲೆಗೊಂದು ಉದ್ಯಾನ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ತಿಂಗಳಿಗೊಮ್ಮೆ ಶಾಲೆಗೆ ನೀಡಬೇಕು. ಮಠ ಮಂದಿರಗಳು ಸಾವಯವ ಕೃಷಿ ಪದ್ಧತಿ ಕುರಿತು ಜಾಗೃತಿ ಮೂಡಿಸಬೇಕು. ಮಹಿಳೆಯರು ನೀರು ಅಪವ್ಯಯವಾಗದಂತೆ ನೋಡಿಕೊಳ್ಳಬೇಕು’ ಎಂದು ಆಶಿಸಿದರು.
‘ಉದ್ಯಮಿಗಳು ಪ್ರತಿದಿನ ₹1ರಂತೆ ಐದು ವರ್ಷ ಮಠಕ್ಕೆ ನೀಡಿದರೆ ನಾವು 15 ಅಡಿ ಎತ್ತರದ ಗಿಡ ಬೆಳೆಸಿ, ತಾವು ಹೇಳಿದ ಜಾಗದಲ್ಲಿ ನೆಟ್ಟು ಎರಡು ವರ್ಷ ಪೋಷಣೆಯನ್ನೂ ಮಾಡುತ್ತೇವೆ. ಇದರಿಂದ ಪರಿಸರ ಸಂರಕ್ಷಣೆ ಮ್ತು ಸಂವರ್ಧನೆ ಆಗಲಿದೆ. ಇದಕ್ಕೆ ಉದ್ಯಮಿಗಳು ಸಹಕರಿಸಬೇಕು’ ಎಂದು ಕೋರಿದರು.
ರಾಜ್ಯ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆ ಮಾಡುತ್ತಿರುವ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾರ್ಗದರ್ಶನದಡಿ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಲಿದೆ’ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಧ್ಯಕ್ಷತೆ ವಹಿಸಿದ್ದರು. ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಗೋವಾ ವಿಧಾನಸಭೆ ಸಭಾಪತಿ ರಮೇಶ ತಾವಡೇಕರ, ಶಾಸಕ ಮಹೇಶ ಶಿಂದೆ ಇದ್ದರು.