ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಫೆ. 27ರಂದು ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಿಷ್ಟಾಚಾರದ ಕರ್ತವ್ಯಕ್ಕಾಗಿ ಸರ್ಕಾರಿ ಇಲಾಖೆಯ ವಾಹನಗಳು ಅಗತ್ಯ ಇವೆ. ಆದರೆ ಸಂಬಂಧಿಸಿದ ಇಲಾಖೆಯಿಂದ ವಾಹನಗಳನ್ನು ಬಿಡುಗಡೆ ಮಾಡಲು ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಇನ್ನೋವಾ ಹಾಗೂ ಸುಮೋ, ಬೊಲೆರೋ ಸೇರಿದಂತೆ ಇತರೆ ವಾಹನಗಳ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಡಾ. ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಈ ಆದೇಶಕ್ಕೆ ಸಂಬಂಧಿಸಿದ ಅಧಿಕಾರಿಗಳು ಒವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಸಾರಿಗೆ ಇಲಾಖೆ ಸಿಬಂದಿಗಳ ಎದುರು ವಿನಾಕಾರಣ ಸುಳ್ಳು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಈ ಆದೇಶ ಪ್ರತಿಯನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಸುಮಾರು 50 ಕಡೆಗೆ ತಲುಪಿಸಿದ್ದಾರೆ. ಆದರೆ ಸಂಬಂಧಿಸಿದ ಒಬ್ಬರೂ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.ಪ್ರಧಾನಿ ಆಗಮನ ಆಗುತ್ತಿದ್ದರೂ ಶಿಷ್ಟಾಚಾರ ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಈಗ ಸದ್ಯ ಕೇವಲ ಎರಡ್ಮೂರು ವಾಹನಗಳು ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ನೋಂದಣಿ ಮಾಡಿಕೊಂಡಿವೆ. ಆದರೆ ಇನ್ನುಳಿದ ಬೇರೆ ಇಲಾಖೆಗೆ ಸಂಬಂಧಿಸಿದ ವಾಹನಗಳು ಬಾರದೇ ಇರುವುದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಪ್ರಧಾನಿ ಆಗಮನ ಇನ್ನು ಕೇವಲ ಎರಡು ದಿನ ಬಾಕಿ ಉಳಿದಿರುವುದರಿಂದ ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಬೇರೆ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ವಾಹನಗಳನ್ನು ಬಿಟ್ಟು ಕೊಡಲು ಹಿಂದೇಟು ಹಾಕುತ್ತಿದ್ದಾರೆದು ಸಾರಿಗೆ ಇಲಾಖೆಯ ಕೆಲ ಅಧಿಕಾರಿಗಳು ನೋವು ತೋಡಿಕೊಂಡಿದ್ದಾರೆ.
ವಾಹನ ಬಿಡುಗಡೆ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಪ್ರತಿಯಲ್ಲಿ ಇದ್ದರೂ ಇದನ್ನು ಓದಿಯೂ ಸುಮ್ಮನೇ ಕುಳಿತುಕೊಂಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.