Breaking News

ವರ್ತುಲ ರಸ್ತೆ: ಟೆಂಡರ್‌ಗೆ ಸರ್ಕಾರ ಅನುಮತಿ

Spread the love

ಬೆಳಗಾವಿ: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ರಿಂಗ್‌ ರಸ್ತೆ ನಿರ್ಮಿಸಲು ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿದೆ. ಅಲ್ಲದೇ, ಕಳೆದ ಜನವರಿ 1ರಂದು ಟೆಂಡರ್‌ ಪ್ರಕ್ರಿಯೆಗೂ ಅನುಮತಿ ನೀಡಿದೆ.

ತಮ್ಮ ಫಲವತ್ತಾದ ಭೂಮಿ ಹಾಳಾಗುತ್ತದೆ ಎಂದು 31 ಹಳ್ಳಿಗಳ ರೈತರು ಈ ರಿಂಗ್ ರಸ್ತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಎರಡು ವರ್ಷಗಳಿಂದ ಇದರ ಕೆಲಸಗಳು ಆಮೆಗತಿಯಲ್ಲಿ ಸಾಗಿವೆ. ಮತ್ತೆ ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೂ ಹತ್ತಿದ್ದಾರೆ. ಇದೆಲ್ಲರ ಆಚೆಗೂ ಸರ್ಕಾರದ ಮಟ್ಟದಲ್ಲಿ ಯೋಜನೆ ಸಿದ್ಧಗೊಳ್ಳುತ್ತಲೇ ಇದೆ.

ವಿಧಾನ ಪರಿಷತ್‌ ಸದಸ್ಯ ಪ್ರೊ.ಸಾಬಣ್ಣ ತಳವಾರ, ಸದನದಲ್ಲಿ ಈಚೆಗೆ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಲಿಖಿತ ಪ್ರತಿಕ್ರಿಯೆ ನೀಡಿದ್ದು, ಎಲ್ಲ ಅಂಶಗಳನ್ನೂ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಈವರೆಗೆ ಇದ್ದ ಊಹಾ‍ಪೋಹಗಳಿಗೆ ತೆರೆ ಎಳೆದಿದ್ದಾರೆ.

ಯೋಜನೆ ಗಾತ್ರ: ಒಟ್ಟು 34.480 ಕಿ.ಮೀ ಉದ್ದದ ಕಾಮಗಾರಿ ಇದು. ಇದಕ್ಕಾಗಿ 510.84 ಹೆಕ್ಟೇರ್‌ ಭೂಮಿ ಸ್ವಾಧೀನಕ್ಕೆ ಅನುಮೋದನೆ ನೀಡಲಾಗಿದೆ. ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಬಹುಪಾಲು ರೈತರಿಗೆ ಈಗಾಗಲೇ ಜಿಲ್ಲಾಡಳಿತದ ಮೂಲಕ ಪರಿಹಾರದ ಮೊತ್ತವನ್ನು ತಲುಪಿಸಲಾಗಿದೆ ಎಂದು ಸಚಿವರು ವಿವರ ನೀಡಿದ್ದಾರೆ.

2017ರ ಅಕ್ಟೋಬರ್‌ 14ರಂದು ಇದರ ಡಿಪಿಆರ್‌ ಸಿದ್ಧಪಡಿಸಲು ಒಪ್ಪಿಗೆ ಸೂಚಿಸಲಾಗಿದೆ. ಯೋಜನಾ ವರದಿಗಾಗಿ ಈವರೆಗೆ ₹1.61 ಕೋಟಿ ವೆಚ್ಚ ಮಾಡಲಾಗಿದೆ. ಆರಂಭದಲ್ಲಿ ಯೋಜನೆಯ ಒಟ್ಟು ಅಂದಾಜು ವೆಚ್ಚ ₹280 ಕೋಟಿ ಇತ್ತು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಈ ರಿಂಗ್‌ ರಸ್ತೆ ನಿರ್ಮಾಣದ ಹೊಣೆ ಹೊತ್ತಿದೆ. ನಿಯಮದ ಪ್ರಕಾರ ಯೋಜನೆಯ ವೆಚ್ಚದ ಶೇ 50ರಷ್ಟನ್ನು ರಾಜ್ಯ ಸರ್ಕಾರ ನೀಡಬೇಕು. ಅದರಂತೆ, 2021ರ ಜನವರಿಯಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ ₹140 ಕೋಟಿಯನ್ನು ನೀಡಲು ಒಪ್ಪಿಗೆ ಸೂಚಿಸಿದೆ.

ಆದರೆ, 2021ರ ಆಗಸ್ಟ್‌ನಲ್ಲಿ ಪ್ರಾಧಿಕಾರವು ಇದರ ಪರಿಷ್ಕೃತ ವೆಚ್ಚವನ್ನು ಮಂಡಸಿದೆ. ಭೂಸ್ವಾಧೀನದ ಪರಿಷ್ಕೃತ ಯೋಜಿತ ವೆಚ್ಚವು ₹531 ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹೀಗಾಗಿ, ರಾಜ್ಯ ಸರ್ಕಾರ ತನ್ನ ಪಾಲಿನಲ್ಲಿ ಹೆಚ್ಚುವರಿ ಅನುದಾನ ನೀಡುವುದು ಮಾತ್ರ ಬಾಕಿ ಇದೆ.

‘ವರ್ತುಲ ರಸ್ತೆಯ ಯೋಜನಾ ವರದಿ ಅಂತಿಮ ಹಂತದಲ್ಲಿದ್ದು, ಟೆಂಡರ್‌ ಕರೆಯಲು 2023ರ ಜನವರಿ 2ರಂದು ಅನುಮತಿ ಕೂಡ ನೀಡಲಾಗಿದೆ’ ಎಂದೂ ಸಾಬಣ್ಣ ತಳವಾರ ಅವರಿಗೆ ನೀಡಿದ ಉತ್ತರದಲ್ಲಿದೆ.

4+2 ಮಾದರಿಯ ವರ್ತುಲ ರಸ್ತೆ

ಪ್ರಸ್ತುತ ಬೆಳಗಾವಿ ನಗರಕ್ಕೆ ‘ರಾಷ್ಟ್ರೀಯ ಹೆದ್ದಾರಿ 4ಎ’ಗೆ ಹೊಂದಿಕೊಂಡಂತೆ ಕಿ.ಮೀ. 11ರಿಂದ ‘ರಾಷ್ಟ್ರೀಯ ಹೆದ್ದಾರಿ 4’ ಕಿ.ಮೀ 516ರಲ್ಲಿ ಕೂಡುವ ರಸ್ತೆ ಇದಾಗಲಿದೆ. ಅಂದರೆ, ಮಚ್ಚೆ ಗ್ರಾಮದಿಂದ ಹಲಗಾ, ಇಲ್ಲಿಂದ ರಾಷ್ಟ್ರೀಯ ಹೆದ್ದಾರಿ-4 ಹಾಗೂ ಮಚ್ಚೆ ಗ್ರಾಮದಿಂದ ಬಾಕ್ಸೈಟ್‌ ರಸ್ತೆ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ-4. ಹೀಗೆ ಎರಡು ಭಾಗಗಳಲ್ಲಿ ಈ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.

ಒಟ್ಟು ನಾಲ್ಕು ಮಾರ್ಗಗಳ ಹೆದ್ದಾರಿ ಹಾಗೂ ಎರಡು ಸರ್ವಿಸ್‌ ರಸ್ತೆಗಳೂ ಇದಕ್ಕೆ ಇರಲಿವೆ.


Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ