ಹನೂರು: ತಾಲ್ಲೂಕಿನ ಗಡಿ ಭಾಗದ ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬರ ಶವ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಈತ ಕಳ್ಳ ಬೇಟೆಗಾರ ಆಗಿರಬಹುದು ಎಂದು ಶಂಕಿಸಲಾಗಿದೆ.
ಕಾವೇರಿ ವನ್ಯಧಾಮದ ಗೋಪಿನಾಥಂ ವಲಯದ ಅಡಿಪಾಲರ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ತಮಿಳುನಾಡಿನ ನಾಲ್ವರು ಬೇಟೆಗಾರರು ಜಿಂಕೆ ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಒಂದು ನಾಡ ಬಂದೂಕು ಹಾಗೂ ತೆಪ್ಪದಲ್ಲೇ ಎಲ್ಲ ಪರಿಕರಳಗನ್ನು ಬಿಟ್ಟು ಬೇಟೆಗಾರರು ಪರಾರಿಯಾಗಿದ್ದರು.
ಕಾವೇರಿ ನದಿಯ ತಮಿಳುನಾಡು ಭಾಗದಲ್ಲಿ ಶವ ಪತ್ತೆಯಾಗಿದೆ. ಮೃತಪಟ್ಟವನ ಹೆಸರನ್ನು ತಮಿಳುನಾಡಿನ ಗೋವಿಂದಪಾಡಿಯ ರಾಜ ಎಂದು ಗುರುತಿಸಲಾಗಿದೆ. ಈತ ಬೇಟೆಗಾರರ ತಂಡದಲ್ಲಿದ್ದ ಎಂದು ಶಂಕಿಸಲಾಗಿದೆ.