ಸವದತ್ತಿ: ಬಾಕಿ ವೇತನ ಹಾಗೂ ನೇಮಕಾತಿ ಆದೇಶ ನೀಡಲು ಆಗ್ರಹಿಸಿ ಧಾರವಾಡದ ಜಲಮಂಡಳಿಯ ದಿನಗೂಲಿ ಕಾರ್ಮಿಕರು ಪಟ್ಟಣದಲ್ಲಿ ಬುಧವಾರ ನಡೆಸಿದ ಧರಣಿ ವೇಳೆ, ನೂಕಾಟ- ತಳ್ಳಾಟ ನಡೆದಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಈ ಸಂದರ್ಭದಲ್ಲಿ 12 ಮಂದಿಗೆ ಸಣ್ಣಪುಟ್ಟ ಗಾಯಗಳಾದವು.
ಹುಬ್ಬಳಿ- ಧಾರವಾಡ ನಗರಗಳಿಗೆ ನೀರು ಸರಬರಾಜು ಮಾಡುವ ಇಲ್ಲಿನ ಜಾಕ್‌ವೆಲ್ ಬಳಿ ಬೆಳಿಗ್ಗೆಯಿಂದ ಶಾಂತಿಯುತ ಧರಣಿ ನಡೆಸಲಾಯಿತು. ಮಧ್ಯಾಹ್ನದವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ, ಕೋಪಗೊಂಡ ಪ್ರತಿಭಟನಾಕಾರರು ಜಾಕ್‌ವೆಲ್‌ಗೆ ನುಗ್ಗಿ ನೀರು ಸ್ಥಗಿತಗೊಳಿಸಲು ಮುಂದಾದರು. ಈ ವೇಳೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಎಳೆದಾಡಿದರು. ಅಡ್ಡ ಬಂದ ಸಿಪಿಐ ಅವರನ್ನೂ ಕೆಳಕ್ಕೆ ತಳ್ಳಿದರು. ಆಗ ಹೋರಾಟಗಾರರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ಇದರಿಂದ ಹೋರಾಟಗಾರರು ಚೆಲ್ಲಾಪಿಲ್ಲಿಯಾಗಿ ಹೋದರು. ಗಾಯಗೊಂಡ 12 ಮಂದಿ ಇಲ್ಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.