Breaking News

KPSC: ಪಿಡಬ್ಲ್ಯುಡಿ 335 ಜೆಇ ಹುದ್ದೆ: ಅಂತಿಮ ಆಯ್ಕೆ ಪಟ್ಟಿ ವಿಳಂಬ

Spread the love

ಬೆಂಗಳೂರು: ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಕಿರಿಯ ಎಂಜಿನಿಯರ್‌ (ಜೆಇ) 335 ಹುದ್ದೆಗಳಿಗೆ 1:1 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ‌ಪಟ್ಟಿ ಮೂರು ಬಾರಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸಭೆಯಲ್ಲಿ ಮಂಡನೆಯಾದರೂ ಅನುಮೋದನೆ ಸಿಕ್ಕಿಲ್ಲ.

 

‘ತಾತ್ಕಾಲಿಕ ಪಟ್ಟಿ ಸಿದ್ಧಗೊಂಡು ಈಗಾಗಲೇ ತಿಂಗಳು ಕಳೆದಿರುವುದರಿಂದ, ಫೆ. 7ರಂದು ನಡೆದ ಆಯೋಗದ ಸಭೆಯಲ್ಲಿ ಎಲ್ಲ ಸದಸ್ಯರ ಅನುಮೋದನೆ ಪಡೆದು ಆಯ್ಕೆ ಪಟ್ಟಿ ಬಿಡುಗಡೆ ಮಾಡಲು ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಮುಂದಾಗಿದ್ದರು. ಆಯೋಗದ 12 ಸದಸ್ಯರ ಪೈಕಿ ಏಳು ಸದಸ್ಯರು ಸಭೆಗೆ ಹಾಜರಾಗಿದ್ದರು. ಗೈರಾದವರನ್ನು ಸಂಪರ್ಕಿಸಿದಾಗ, ಕಿರಿಯರೊಬ್ಬರನ್ನು ಬಿಟ್ಟು ಉಳಿದವರು ಒಪ್ಪಿಗೆ ಸೂಚಿಸಿದ್ದರು’ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

‘ಫೆ. 10 ಮತ್ತೆ ಸಭೆ ಸೇರಲು ಕಾರ್ಯದರ್ಶಿ ಫೆ. 7ರ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಸಭೆಯಲ್ಲಿದ್ದ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ‘ಸಭೆಯ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಹೀಗಾಗಿ ಮುಂದೂಡಲು ಸೂಚಿಸಿದ್ದೇನೆ’ ಎಂದು ಇತರ ಸದಸ್ಯರಿಗೆ ಅಧ್ಯಕ್ಷರು ಬುಧವಾರ ಮಾಹಿತಿ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ನೇಮಕಾತಿ ಪ್ರಕ್ರಿಯೆ ವೇಳೆ ಪಾಲಿಸಬೇಕಾದ ನಿಯಮಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಫೆ. 2ರಂದು ಹೊರಡಿಸಿದ್ದ ಸುತ್ತೋಲೆ ಪ್ರಕಾರವೇ ಆಯ್ಕೆ ಪಟ್ಟಿಯನ್ನು ಕಾರ್ಯದರ್ಶಿ ಪರಿಷ್ಕರಿಸಿದ್ದರು. ಅಲ್ಲದೆ, ಸಹಾಯಕ ಎಂಜಿನಿಯರ್‌ (ಎಇ) ಹುದ್ದೆಗೆ ಆಯ್ಕೆಯಾದವರನ್ನು ಪಟ್ಟಿಯಿಂದ ಕೈಬಿಟ್ಟು ಜೆಇ ಪಟ್ಟಿ ಅಂತಿಮಗೊಳಿಸಲಾಗಿತ್ತು. ಹೀಗಾಗಿ, ಅನುಮೋದನೆ ನೀಡದೇ ಇರಲು ಯಾವುದೇ ಕಾರಣ ಇರಲಿಲ್ಲ. ಹೀಗಾಗಿ, ಇತರ ಸದಸ್ಯರು ಪಟ್ಟಿಗೆ ಅನುಮೋದನೆ ನೀಡುವಂತೆ ಅಧ್ಯಕ್ಷರಲ್ಲಿ ಒತ್ತಾಯಿಸಿದ್ದರು. ಆದರೆ, ‘ಆಯ್ಕೆ ಪಟ್ಟಿಯನ್ನು ನಾನು ನೋಡಬೇಕಿದೆ’ ಎಂದು ಕಿರಿಯ ಸದಸ್ಯರೊಬ್ಬರು ಹೇಳಿದ್ದರಿಂದ, ಅಧ್ಯಕ್ಷರು ಪಟ್ಟಿ ಪ್ರಕಟಣೆಗೆ ಒಪ್ಪಿಗೆ ನೀಡಲಿಲ್ಲ’ ಎಂದೂ ಮೂಲಗಳು ಹೇಳಿವೆ.

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರಿಗೆ ಕರೆ ಮಾಡಿ, ವಾಟ್ಸ್‌ಆಯಪ್‌ ಸಂದೇಶ ಕಳುಹಿಸಿ ಸಂಪರ್ಕಿಸಲು ಯತ್ನಿಸಿದರೂ, ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ

ನೇಮಕಾತಿ ಪ್ರಕ್ರಿಯೆಗಳ ಕುರಿತು ಇದೇ 2ರಂದು ರಾಜ್ಯ ಸರ್ಕಾರ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ, ಅಂತಿಮ ಆಯ್ಕೆ ಪಟ್ಟಿ ಇನ್ನೂ ಪ್ರಕಟಿಸದೇ ಇರುವ ನೇಮಕಾತಿಗಳಲ್ಲಿ, ನೇಮಕಾತಿ ಪ್ರಾಧಿಕಾರಗಳು (ಕೆಪಿಎಸ್‌ಸಿ, ಕೆಇಎ) ಇತರ ವೃಂದದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಮೊದಲು ತಯಾರಿಸಬೇಕು. ಆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ (ಕೆಕೆ) ಭಾಗದ ಅಭ್ಯರ್ಥಿಗಳಿದ್ದರೆ ಅವರನ್ನು ‘ಕೆಕೆ ಮೀಸಲಾತಿ’ಯಡಿ ಪರಿಗಣಿಸದೆ, ಸ್ವಂತ ಅರ್ಹತೆಯಡಿ ಪರಿಗಣಿಸಬೇಕು. ಆ ನಂತರ ‘ಕೆಕೆ ಮೀಸಲಾತಿ’ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಇದರಿಂದಾಗಿ, ‘ಕೆಕೆ ಮೀಸಲಾತಿ’ ಅಡಿಯಲ್ಲಿ ಅಲ್ಲದೆಯೂ, ಆ ಭಾಗದ ಅಭ್ಯರ್ಥಿಗಳಿಗೆ ಆಯ್ಕೆಯಾಗುವ ಭಾಗ್ಯ ಸಿಗಲಿದೆ.‌ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ ಹುದ್ದೆ ಆಯ್ಕೆ ಅಂತಿಮ ಪಟ್ಟಿ (ಜ. 26) ಈ ಸುತ್ತೋಲೆಗಿಂತ ಮೊದಲೇ ಪ್ರಕಟಗೊಂಡಿದ್ದರಿಂದ ಅದಕ್ಕೆ ಅನ್ವಯ ಆಗಿಲ್ಲ. ಆದರೆ, ಕಿರಿಯ ಎಂಜಿನಿಯರ್‌ ಆಯ್ಕೆ ಪಟ್ಟಿಗೆ ಅನ್ವಯವಾಗಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ