ಬೆಂಗಳೂರು: ‘ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ಭ್ರಷ್ಟಾಚಾರವನ್ನು ಬೆಂಬಲಿಸಿದವರು, ಅದಕ್ಕೆ ಕುಮ್ಮಕ್ಕು ಕೊಟ್ಟವರು ಕಾಂಗ್ರೆಸ್‌ನವರು. ಭ್ರಷ್ಟಾಚಾರದ ಜೊತೆಗೇ ಸರ್ಕಾರ ನಡೆಸಿದವರು. ಭ್ರಷ್ಟಾಚಾರ ಅವರ ಸರ್ಕಾರದ ಒಂದು ಭಾಗವಾಗಿತ್ತು’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
‘ಭ್ರಷ್ಟಾಚಾರದ ತೊಲಗಿಸಿ, ಬೆಂಗಳೂರು ಉಳಿಸಿ’ ಎಂದು ಆಗ್ರಹಿಸಿ ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಿಬಿಎಂಪಿಯಲ್ಲಿನ ಭ್ರಷ್ಟಾಚಾರ ಅವರ ಅವಧಿಯಲ್ಲಿ ನಡೆದಿದೆ. ಪ್ರತಿಭಟನೆ ನಡೆಸುವುದು ಕಾಂಗ್ರೆಸ್‌ನವರ ಸೋಗಲಾಡಿತನ. ತಾವು ಮಾಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಅವರು ಈ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಸರ್ಕಾರದ ಅವಧಿಯ ಎಲ್ಲ ಭ್ರಷ್ಟಚಾರ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ನಮ್ಮ ಮೇಲೆ ಆರೋಪ ಮಾಡುವ ಬದಲು ಅವರೂ ಅದೇ ರೀತಿ ಕೊಡಲಿ. ಲೋಕಾಯುಕ್ತವನ್ನು ಮುಚ್ಚಿದಂಥ ಪುಣ್ಯಾತ್ಮರು ಕಾಂಗ್ರೆಸ್‌ನವರು. ಭ್ರಷ್ಟಾಚಾರ ವಿರುದ್ಧ ಸಂವಿಧಾನ ಬದ್ಧವಾದ ಸಂಸ್ಥೆಯನ್ನು ಮುಚ್ಚಿರುವವರು ಅವರು ನಮಗೆ ಪಾಠ ಹೇಳ್ತಾರಾ?’ ಎಂದು ಕಿಡಿಕಾರಿದರು.