Breaking News

ಬಿಜೆಪಿ ಸೋಲಿಸಲು ಪಣ: ಇದೇ ಮೊದಲ ಬಾರಿಗೆ ಬಿಆರ್‌ಎಸ್‌ ಮೆಗಾ ಸಮಾವೇಶ

Spread the love

ಮ್ಮಾಮ್‌: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌)ಯ ಮೆಗಾ ಸಮಾವೇಶ ಬುಧವಾರ ಖಮ್ಮಾಮ್‌ನಲ್ಲಿ ನಡೆದಿದೆ. ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿಗಳು ಈ ಸಭೆಯಲ್ಲಿ ಪಾಲ್ಗೊಂಡು, ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿವೆ.

 

ಇದೇ ಮೊದಲ ಬಾರಿಗೆ ಇಂಥದ್ದೊಂದು ಸಭೆ ನಡೆದಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೂಗೆಯುವ ಶಪಥ ಮಾಡಲಾಗಿದೆ. ಜತೆಗೆ, 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಆರ್‌ಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಅನ್ನದಾತರಿಗೆ ಉಚಿತ ವಿದ್ಯುತ್‌ ನೀಡಲಾಗುವುದು. ತೆಲಂಗಾಣ ರೈತ ಬಂಧು ಮಾದರಿಯ ಯೋಜನೆಗಳನ್ನು ರಾಷ್ಟ್ರವ್ಯಾಪಿ ಜಾರಿ ಮಾಡಲಾಗುವುದು. ಜತೆಗೆ, ಸಶಸ್ತ್ರ ಪಡೆಗಳಿಗೆ ಯೋಧರನ್ನು ನೇಮಕ ಮಾಡುವ ಅಗ್ನಿವೀರ ಯೋಜನೆಯನ್ನು ರದ್ದು ಮಾಡಲಾಗುವುದು ಎಂದು ಸಿಎಂ ಕೆಸಿಆರ್‌ ಘೋಷಿಸಿದ್ದಾರೆ.

ಒಂದೇ ಕಲ್ಲಿಗೆ ಎರಡು ಹಕ್ಕಿ:
ಬಿಆರ್‌ಎಸ್‌ ಸಮಾವೇಶದ ಮೂಲಕ ಸಿಎಂ ಕೆಸಿಆರ್‌ ಅವರು “ಒಂದೇ ಕಲ್ಲಿಗೆ ಎರಡು ಹಕ್ಕಿ’ಯನ್ನು ಉರುಳಿಸಿದ್ದಾರೆ. ಒಂದು ಕಡೆ ರಾಜ್ಯದಲ್ಲಿ ತಮ್ಮ ಪಕ್ಷದ ನೆಲೆಯನ್ನು ಗಟ್ಟಿಗೊಳಿಸುವ, ಆಡಳಿತವಿರೋಧಿ ಅಲೆಯನ್ನು ಹತ್ತಿಕ್ಕುವ ಯತ್ನ ನಡೆಸಿದರೆ, ಮತ್ತೊಂದೆಡೆ ರಾಷ್ಟ್ರ ರಾಜಕಾರಣ ಪ್ರವೇಶಿಸುವ ಆಸೆಗೂ ಜೀವ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ ಸೇರಿದಂತೆ ಪ್ರತಿಪಕ್ಷಗಳ ಅನೇಕ ನಾಯಕರು ಪಾಲ್ಗೊಂಡಿದ್ದರು. ಇನ್ನು, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಬಿಆರ್‌ಎಸ್‌ಗೆ ಬೆಂಬಲ ಘೋಷಿಸಿದ್ದು, ಕರ್ನಾಟಕದಲ್ಲಿ “ಪಂಚರತ್ನ’ ಯಾತ್ರೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಬಿಆರ್‌ಎಸ್‌ ಸಮಾವೇಶಕ್ಕೆ ಗೈರಾಗಿದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಈ ಎಲ್ಲ ನಾಯಕರೂ ಯಾದಾದ್ರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಹೊಸ ಪ್ರತಿರೋಧಕ್ಕೆ ಕರೆ
ದೇಶದ ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಬಿಜೆಪಿ ಧ್ವಂಸಗೊಳಿಸುತ್ತಿದೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, “ಸಂವಿಧಾನ, ಪ್ರಜಾಸತ್ತೆ ಮತ್ತು ಜಾತ್ಯತೀತತೆಯನ್ನು ರಕ್ಷಿಸಬೇಕೆಂದರೆ ಹೊಸ ಪ್ರತಿರೋಧ ಹುಟ್ಟಬೇಕು. ಜನರೇ ಒಗ್ಗಟ್ಟಾಗಿ ದೇಶವನ್ನು ವಿಭಜಿಸುವ ಕೋಮುವಾದಿ ಅಜೆಂಡಾದ ವಿರುದ್ಧ ನಿಲ್ಲಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಖಮ್ಮಾಮ್‌ ಎನ್ನುವುದು ಪ್ರತಿರೋಧದ ನೆಲ. ಇಲ್ಲೇ ಹೊಸ ಪ್ರತಿರೋಧವು ಆರಂಭವಾಗಲಿ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಾವು ಯಾವ ಆದರ್ಶಗಳನ್ನು ರಕ್ಷಿಸಲು ತೋರಿದೆವೋ ಆ ಪ್ರತಿರೋಧ, ಜಾತ್ಯತೀತತೆ, ಪ್ರಜಾಸತ್ತೆ, ಸಂವಿಧಾನವನ್ನು ಹಾಗೂ ದೇಶವನ್ನು ರಕ್ಷಿಸುವ ಪ್ರತಿರೋಧ ಇಲ್ಲಿಂದಲೇ ಮೊಳಗಬೇಕು ಎಂದೂ ಪಿಣರಾಯಿ ಕರೆ ನೀಡಿದರು.

ಜೋಕ್‌ ಇನ್‌ ಇಂಡಿಯಾ
ಕೇಂದ್ರ ಸರ್ಕಾರವು “ಮೇಕ್‌ ಇನ್‌ ಇಂಡಿಯಾ’ ಎಂದು ಹೇಳುತ್ತಲೇ ಇದೆ. ಆದರೆ, ದೇಶದ ಪ್ರತಿ ಬೀದಿಯಲ್ಲೂ ಚೈನಾ ಬಜಾರ್‌ಗಳೇ ಕಾಣಿಸುತ್ತಿವೆ. ಹೀಗಾಗಿ ಮೇಕ್‌ ಇನ್‌ ಇಂಡಿಯಾ ಈಗ “ಜೋಕ್‌ ಇನ್‌ ಇಂಡಿಯಾ’ ಆಗಿದೆ ಎಂದು ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ವ್ಯಂಗ್ಯವಾಡಿದರು. ಅಂತಾರಾಜ್ಯ ಜಲ ವಿವಾದಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರಣ. ಎಲ್‌ಐಸಿ(ಭಾರತೀಯ ಜೀವ ವಿಮೆ)ಯಲ್ಲಿನ ಬಂಡವಾಳ ವಾಪಸಾತಿ ಪ್ರಕ್ರಿಯೆಯನ್ನು ನಾವೆಲ್ಲರೂ ವಿರೋಧಿಸುತ್ತೇನೆ ಎಂದೂ ಅವರು ಹೇಳಿದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ