ಧಾರವಾಡ: ಕಳ್ಳತನದ ಆರೋಪಿಯೊಬ್ಬ ಮೊಬೈಲ್ ಫೋನ್ ಟವರ್ ಏರಿ ಕುಳಿತು ಕೆಲವು ಕ್ಷಣಗಳ ಕಾಲ ತಲೆನೋವಾಗಿ ಪರಿಣಮಿಸಿದ ಪ್ರಕರಣವೊಂದು ನಡೆದಿದೆ. ಬಿರಿಯಾನಿ ಕೊಡಿ, ಸಿಗರೇಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದ ಈ ಕಳ್ಳ ಬಳಿಕ ಕೆಳಗಿಳಿಯಲು ಮತ್ತೊಂದು ಬೇಡಿಕೆ ಇರಿಸಿದ್ದ.
ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಇಂದು ಈ ಘಟನೆ ನಡೆದಿದೆ. ಜಾವೀದ್ ಡಲಾಯತ್ ಎಂಬ ಈತ ಕಳ್ಳತನದ ಆರೋಪ ಎದುರಿಸುತ್ತಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ. ಟವರ್ ತುದಿಗೇರಿದ್ದ ಈತನನ್ನು ನೋಡಲು ಜನರು ಜಮಾಯಿಸಿದ್ದು, ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಜನರಲ್ ತಿಮ್ಮಯ್ಯ ಅಕಾಡೆಮಿಯ ರಕ್ಷಣಾ ಸಿಬ್ಬಂದಿ ಕೂಡ ಬರುವಂತಾಗಿತ್ತು.
ಮೂರು ಗಂಟೆಗೂ ಹೆಚ್ಚು ಕಾಲ ಟವರ್ ಮೇಲಿದ್ದ ಈತ, ತಾನು ಅಲ್ಲಿಂದ ಕೆಳಕ್ಕಿಳಿಯಬೇಕಾದರೆ ಮೊದಲು ಬಿರಿಯಾನಿ ಕೊಡುವಂತೆ ಕೇಳಿದ್ದ. ಆದರೆ ಅದನ್ನು ತಿನ್ನದೆ ಎಸೆದಿದ್ದ. ನಂತರ ನೀರು, ಬಳಿಕ ಸಿಗರೇಟ್ಗೆ ಬೇಡಿಕೆ ಇಟ್ಟಿದ್ದ. ಸಿಗರೇಟ್ ಸೇದಿ ಕೆಳಗಿಳಿಯುವುದಾಗಿ ಹೇಳಿದ್ದ ಈತ ಅದಾದ ಮೇಲೂ ಕೆಳಗೆ ಇಳಿಯಲಿಲ್ಲ.
ನಂತರ ನ್ಯಾಯಾಧೀಶರು ಸ್ಥಳಕ್ಕೆ ಬಂದರೆ ಕೆಳಗೆ ಇಳಿಯುವುದಾಗಿ ಹೇಳಿದ್ದ. ಅವರು ಬರುವವರೆಗೂ ಕೆಳಗೆ ಬರಲ್ಲ ಎಂದಾಗ, ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ನ್ಯಾಯಾಧೀಶರು ಬಂದಿದ್ದಾರೆ ಎಂದು ನಂಬಿಸಿ ಕೆಳಗಿಳಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಜೈಲಿನಲ್ಲಿ ಇದ್ದಾಗಲೂ ಆರೋಪಿ ಇಂಥದ್ದೇ ಹುಚ್ಚಾಟ ಆಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Laxmi News 24×7