ಬೆಂಗಳೂರು: ಮಂಡ್ಯದಲ್ಲಿ ಇದೇ ವರ್ಷ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಧರಿಸಿದೆ. ಇದರಿಂದಾಗಿ ಒಂದೇ ವರ್ಷ ಎರಡು ಸಮ್ಮೇಳನ ನಡೆಸಿದಂತಾಗಲಿದೆ.
ಹಾವೇರಿಯಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ಸಮ್ಮೇಳನದ ಆತಿಥ್ಯವನ್ನು ಮಂಡ್ಯಕ್ಕೆ ನೀಡಲಾಗಿದೆ.
ಕಸಾಪ 1915ರಿಂದ ನಿಯಮಿತವಾಗಿ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಂಡು ಬರುತ್ತಿದೆ. ವರ್ಷಕ್ಕೊಮ್ಮೆ ನಡೆಯಬೇಕಿದ್ದ ಈ ಸಮ್ಮೇಳನ, ಕಾರಣಾಂತರಗಳಿಂದ ಈ ಹಿಂದೆಯೂ ವರ್ಷಕ್ಕೆ ಎರಡು ಬಾರಿ ನಡೆದಿದೆ.
2020ರ ಫೆ.5ರಿಂದ ಫೆ.7ರವರೆಗೆ 85ನೇ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ನಡೆದಿತ್ತು. 2021ರ ಫೆಬ್ರುವರಿ ತಿಂಗಳಲ್ಲಿ 86ನೇ ಸಾಹಿತ್ಯ ಸಮ್ಮೇಳನ ನಡೆಸಲು ಪರಿಷತ್ತಿನ ಹಿಂದಿನ ಕಾರ್ಯಕಾರಿ ಸಮಿತಿ ಕಾರ್ಯಯೋಜನೆ ರೂಪಿಸಿತ್ತು. ಅದರಂತೆ ಸರ್ಕಾರವು 2021ರ ಫೆ.26ರಿಂದ ಫೆ.28ರವರೆಗೆ ಸಮ್ಮೇಳನ ನಡೆಸುವುದಾಗಿ ಘೋಷಿಸಿತ್ತು.
ಆದರೆ, ಕೋವಿಡ್‌ನಿಂದಾಗಿ ಸಮ್ಮೇಳನ ನಡೆದಿರಲಿಲ್ಲ. 2022ರ ನ.11ರಿಂದ ನ.13ರವರೆಗೆ ನಡೆಸಲು ನಿರ್ಧರಿಸಿದರೂ, ಅಗತ್ಯ ಸಿದ್ಧತೆ ಆಗದ ಕಾರಣ ಮತ್ತೆ ಮುಂದೂಡಲಾಗಿತ್ತು. ಇದರಿಂದಾಗಿ ಎರಡು ವರ್ಷಗಳ ಬಳಿಕ 86ನೇ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಯಿತು. ಹೀಗಾಗಿ, ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ 87ನೇ ಸಾಹಿತ್ಯ ಸಮ್ಮೇಳನ ನಡೆಸಲು ಪರಿಷತ್ತು ಮುಂದಾಗಿದೆ.