Breaking News

ಸರ್ಕಾರಕ್ಕೆ ಬಿಸಿ ತುಪ್ಪವಾದ ಪಂಚಮಸಾಲಿ ಸಮುದಾಯದ ಗಡುವು: ವಚನಾನಂದ ಶ್ರೀ ಮೊರೆ ಹೋದರಾ ಬಿಜೆಪಿ ನಾಯಕರು..?

Spread the love

ಬೆಂಗಳೂರು: ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ಹೊಸ ಪ್ರವರ್ಗ ರಚಿಸಿ ಮೀಸಲಾತಿ ವಿಚಾರದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಜಾಣ ನಡೆ ಅನುಸರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪಂಚಮಸಾಲಿ ಸಮುದಾಯ ಮತ್ತೊಮ್ಮೆ ಸವಾಲಾಗಿ ನಿಂತಿದೆ.

ಅನಿರೀಕ್ಷಿತವಾಗಿ ಎದುರಾದ ಸಂಕಷ್ಟ ಕುರಿತು ಸಚಿವ ಮುರುಗೇಶ್ ನಿರಾಣಿ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿರುವ ಸಿಎಂ, ವಚನಾನಂದ ಶ್ರೀಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಬಿಜೆಪಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಕೋವಿಡ್ ನಡುವೆಯೂ ನಡೆದ ಹೋರಾಟದಿಂದ ಹೈರಾಣಾಗಿದ್ದ ಯಡಿಯೂರಪ್ಪ ಸರ್ಕಾರ ಅಂತಿಮವಾಗಿ ಮೀಸಲಾತಿ ನೀಡುವ ಕುರಿತು ಅಧ್ಯಯನ ಸಮಿತಿ ರಚಿಸುವ ನಿರ್ಧಾರದೊಂದಿಗೆ ಅಲ್ಪ ಸಮಯದ ನಿರಾಳತೆ ಪಡೆದುಕೊಂಡಿತ್ತು ಆದರೆ ನಂತರ ಬಂದ ಬೊಮ್ಮಾಯಿ ಸರ್ಕಾರಕ್ಕೂ ಹೋರಾಟದ ಬಿಸಿ ಮುಟ್ಟಿದ್ದರಿಂದ ಪಂಚಮಸಾಲಿ ಸಮುದಾಯದ ಹೋರಾಟ ತಣಿಸಲು ಮೀಸಲಾತಿಗಾಗಿ ಪ್ರತ್ಯೇಕ ಪ್ರವರ್ಗ ರಚಿಸಿದೆ. 3ಬಿಯಲ್ಲಿದ್ದ ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಡಿ ರಚಿಸಿದೆ. ಇದೇ ವೇಳೆ ರಾಜ್ಯದ ಮತ್ತೊಂದು ಪ್ರಬಲ ಒಕ್ಕಲಿಗ ಸಮುದಾಯವನ್ನು 2 ಸಿ ಪ್ರವರ್ಗಕ್ಕೆ ಸೇರಿಸಲು ತೀರ್ಮಾನಿಸಿದೆ.

ಕೇವಲ ಪಂಚಮಸಾಲಿ ಮೀಸಲಾತಿ ಕುರಿತು ನಡೆದ ಹೋರಾಟಕ್ಕೆ ಇಡೀ ಲಿಂಗಾಯತ ಸಮುದಾಯವನ್ನೇ ಪ್ರತ್ಯೇಕ ಪ್ರವರ್ಗಕ್ಕೆ ವರ್ಗಾಯಿಸಿ ಬೀಸುವ ದೊಣ್ಣೆಯಿಂದ ತಪ್ಪಿಕೊಳ್ಳುವ ಜಾಣ ನಡೆ ಅನುಸರಿಸಿದೆ. ಇದರಿಂದ ಬೆಳಗಾವಿ ಅಧಿವೇಶನದ ವೇಳೆ ವಿಧಾನಸೌಧ ಮುತ್ತಿಗೆಯಿಂದ ಆಗಬೇಕಿದ್ದ ಮುಜುಗರದಿಂದಲೂ ಪಾರಾಗಿತ್ತು. ಒಕ್ಕಲಿಗ ಸಮುದಾಯದ ವಿಚಾರದಲ್ಲಿಯೂ ಇದೇ ಜಾಣತನವನ್ನು ಸರ್ಕಾರ ತೋರಿಸಿದೆ.

ಸರ್ಕಾರಕ್ಕೆ ಮತ್ತೆ ಗಡುವು: ಸರ್ಕಾರದ ನಿರ್ಧಾರಕ್ಕೆ ಕಾದು ನೋಡುವ ತಂತ್ರ ಅನುಸರಿಸಿದ್ದ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಸಮಿತಿ ಇದೀಗ ಸರ್ಕಾರದ ವಿರುದ್ಧ ಮತ್ತೆ ತಿರುಗಿ ಬಿದ್ದಿದೆ. ಸ್ಪಷ್ಟತೆ ಇಲ್ಲದ ರೀತಿ ಕೇವಲ ಪ್ರವರ್ಗ ರಚಿಸಿದೆ. ಇದರಿಂದ ನಮ್ಮ ಬೇಡಿಕೆ ಈಡೇರಿಲ್ಲ ಎಂದು ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸರ್ಕಾರಕ್ಕೆ ಮತ್ತೆ ಗಡುವು ನೀಡಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಆಧರಿಸಿ ಹೊಸ ಪ್ರವರ್ಗ ರಚಿಸಿ, ಅಂತಿಮ ವರದಿ ನಂತರ ಮೀಸಲಾತಿ ಪ್ರಮಾಣ ನಿಗದಿ ಮಾಡುವ ನಿರ್ಧಾರವನ್ನು ಸಿಎಂ ಬೊಮ್ಮಾಯಿ ಪ್ರಕಟಿಸಿದ್ದಾರೆ. ಅಂತಿಮ ವರದಿ ಬರುವ ವೇಳೆ ಚುನಾವಣೆ ಬರಲಿದೆ. ಇದರಿಂದ ಸದ್ಯಕ್ಕೆ ನಾವು ನಿರಾಳ ಎಂದುಕೊಂಡಿದ್ದರು. ಆದರೆ ಇಷ್ಟು ಬೇಗ ಮತ್ತೊಮ್ಮೆ ಹೋರಾಟ ಎದುರಾಗಲಿದೆ ಎನ್ನುವ ನಿರೀಕ್ಷೆ ಮಾಡದ ಸಿಎಂ ಇದೀಗ ಸಮುದಾಯದ ಓಲೈಕೆಗೆ ಯತ್ನಿಸುವ ಕೆಲಸಕ್ಕೆ ಮುಂದಾಗಿದ್ದಾರೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ