ಬೆಳಗಾವಿ: ‘ಮರಾಠಿಗರ ಮೇಲೆ ರಾಜ್ಯ ಸರ್ಕಾರ ಮಾಡುತ್ತಿರುವ ಅನ್ಯಾಯ ಖಂಡಿಸಿ ಡಿ.26ರಂದು ಮಹಾರಾಷ್ಟ್ರದ ಕೊಲ್ಹಾಪುರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ್ ಹೇಳಿದರು.
ಇಲ್ಲಿನ ಮರಾಠಾ ಮಂದಿರದಲ್ಲಿ ಬುಧವಾರ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಡಿ.19ರಂದು ಬೆಳಗಾವಿಯಲ್ಲಿ ಮಹಾಮೇಳಾವ್ ಆಯೋಜಿಸಲು ಮುಂದಾಗಿದ್ದೆವು. ಆದರೆ, ಜಿಲ್ಲಾಡಳಿತ ಅನುಮತಿ ಕೊಡದೆ ಮರಾಠಿಗರಿಗೆ ಅನ್ಯಾಯ ಮಾಡಿದೆ. ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೀಗಾಗಿ, ಕೊಲ್ಹಾಪುರದಲ್ಲಿ ಪ್ರತಿಭಟನೆಗೆ ಮುಂದಾಗಿದ್ದೇವೆ. ಅಲ್ಲಿನ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿ, ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ರವಾನಿಸಲಿದ್ದೇವೆ’ ಎಂದರು.
‘ಅಂದು ನಗರದ ಶಿವಾಜಿ ಉದ್ಯಾನದಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ, ಕೊಲ್ಹಾಪುರಕ್ಕೆ ತೆರಳುತ್ತೇವೆ’ ಎಂದರು.
‘ಮಹಾರಾಷ್ಟ್ರ ಸರ್ಕಾರ ಹಾಗೂ ವಿರೋಧ ಪಕ್ಷದವರು ನಮಗೆ ಬೆಂಬಲ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಅದು ಕಾರ್ಯರೂಪಕ್ಕೆ ಬರಬೇಕು. ನಮ್ಮ ಬೇಡಿಕೆಗಳನ್ನು ಬೆಂಬಲಿಸಿ ಮಹಾರಾಷ್ಟ್ರದಲ್ಲಿ ಒಂದು ದಿನ ಬಂದ್ ಕರೆ ಕೊಡಬೇಕು’ ಎಂದು ಕೋರಿದರು.
ಮುಖಂಡರಾದ ಪ್ರಕಾಶ ಮರಗಾಲೆ, ವಿಕಾಸ ಕಲಘಟಗಿ, ಮಾಲೋಜಿ ಅಷ್ಟೇಕರ್, ರಂಜೀತ್ ಚವ್ಹಾಣಪಾಟೀಲ ಇತರರಿದ್ದರು.
Laxmi News 24×7