ಫಿನಿಕ್ಸ್ (ಆರಿಜೋನಾ), ಮೇ 6- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಮಾರಿ ಸ್ವಭಾವದವರು. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಅಮೆರಿಕವನ್ನು ಕೊರೊನಾ ವೈರಸ್ ಅಲ್ಲೋಲ-ಕಲ್ಲೋಲ ಮಾಡಿ 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರೂ, ಅಧ್ಯಕ್ಷರಿಗೆ ಸೋಂಕಿನ ಲವಲೇಶ ಭಯವೂ ಇಲ್ಲ.
ಇದೇ ಕಾರಣಕ್ಕಾಗಿ ಅವರು ಕಳೆದ ಐದು ತಿಂಗಳಿನಿಂದ ಒಮ್ಮೆಯೂ ಮಾಸ್ಕ್ ಧರಿಸಿಲ್ಲ. ಅಮೆರಿಕ ಅಧ್ಯಕ್ಷರು ಖುದ್ದು ಎರಡು ಬಾರಿ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದಾರೆ. ಫಲಿತಾಂಶ ನೆಗಿಟಿವ್. ಆದರೂ ಇವರು ಎಲ್ಲಿಯೂ ಕೂಡ ಮಾಸ್ಕ್ ಧರಿಸಿದ ನಿದರ್ಶನಗಳಿಲ್ಲ.
ಸಭೆ, ಸುದ್ದಿಗೋಷ್ಠಿ ಸೇರಿದಂತೆ ಎಲ್ಲಿಯೂ ಇವರು ವೈಯಕ್ತಿಕ ಸುರಕ್ಷಿತ ಪರಿಕರ (ಪಿಪಿಇ) ಧರಿಸಿಲ್ಲ. ಈ ಬಗ್ಗೆ ಸುದ್ದಿಗಾರರೂ ಕೇಳಿದರೂ ನಾನು ಧರಿಸುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ಅಮೆರಿಕಕ್ಕೆ ಕೊರೊನಾ ದಾಳಿ ಮಾಡಿದ ನಂತರ ಇದೇ ಮೊದಲ ಬಾರಿಗೆ ವಾಷಿಂಗ್ಟನ್ನಿಂದ ಆರಿಜೋನಾ ಪ್ರಾಂತ್ಯಕ್ಕೆ ಟ್ರಂಪ್ ಭೇಟಿ ನೀಡಿದರು.
ಫೀನಿಕ್ಸ್ ಪ್ರದೇಶದಲ್ಲಿರು ಹನಿವೆಲ್ಸ್ ವೈದ್ಯಕೀಯ ಉಪಕರಣಗಳ ತಯಾರಿಕಾ ಸಂಸ್ಥೆಗೆ ಭೇಟಿ ನೀಡಿ ಮಾಸ್ಕ್ಗಳ ಉತ್ಪಾದನೆಯನ್ನು ಪರಿಶೀಲಿಸಿದರು.
ಆದರೆ ಅಲ್ಲಿನ ಉನ್ನತಾಧಿಕಾರಿಗಳು ಮಾಸ್ಕ್ ನೀಡಿದರೂ ಅದನ್ನು ಅಧ್ಯಕ್ಷರು ಧರಿಸಲಿಲ್ಲ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಎಷ್ಟು ದಿನ ಅಮೆರಿಕನ್ನರನ್ನು ಮನೆಯೊಳಗೆ ಇರುವಂತೆ ಸೂಚಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸುರಕ್ಷಿತ ಪರಿಕರ ಉಪಯೋಗಿಸದೆ ಇರುವುದರಿಂದ ಮತ್ತು ನಿರ್ಬಂಧಗಳನ್ನು ತೆಗೆದು ಹಾಕುವುದರಿಂದ ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇಲ್ಲವೇ ಎಂಬ ಪ್ರಶ್ನೆಗೆ ಅದು ಸಾಧ್ಯವಿದೆ ಎಂದು ಉತ್ತರಿಸಿದರು.
Laxmi News 24×7