ಬೆಂಗಳೂರು, ಮೇ 6- ಐತಿಹಾಸಿಕ ಸ್ಥಳ ಬಾದಾಮಿಯಲ್ಲೂ ಕೊರೊನಾ ಸೋಂಕು ಅಟ್ಟಹಾಸ ಮೆರೆದಿದೆ. ಅಲ್ಲಿನ 13 ಮಂದಿ ಸೇರಿದಂತೆ ರಾಜ್ಯದಲ್ಲಿ 19 ಹೊಸ ಪ್ರಕರಣಗಳು ದಾಖಲಾಗಿದ್ದು , ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ.
ಕೊರೊನಾ ಹಾಟ್‍ಸ್ಪಾಟ್ ಆಗಿದ್ದ ಬೆಂಗಳೂರಿನಲ್ಲಿ ಇಂದು ಎರಡು ಹೊಸ ಪ್ರಕರಣಗಳು ಪತ್ತೆಯಾಗಿದ್ದು , ಮಂಗಮ್ಮನಪಾಳ್ಯದಲ್ಲಿ ನಿನ್ನೆ ಖಾಸಗಿ ಸಂಸ್ಥೆಯ ಡಿಲೆವೆರಿ ಬಾಯ್‍ಗೆ ಸೊಂಕು ತಗುಲಿದ್ದು , ಆತನಿಂದಲೇ ಇಂದು ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ.
ಸೋಂಕಿತ ಡಿಲೆವರಿ ಬಾಯ್ ಮತ್ತೆ ಯಾರೊಂದಿಗೆ ಸಂಪರ್ಕವಿರಿಸಿಕೊಂಡಿದ್ದ ಎಂಬ ಬಗ್ಗೆ ಆರೋಗ್ಯಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತ ಹಲವಾರು ಮನೆಗಳಿಗೆ ತೆರಳಿ ಪಾರ್ಸಲ್ ಡಿಲೆವರಿ ಮಾಡಿರುವ ಪಟ್ಟಿಯನ್ನು ಸಿದ್ಧಪಡಿಸಿರುವ ಆರೋಗ್ಯಾಧಿಕಾರಿಗಳು ಸಂಪರ್ಕವಿರಿಸಿಕೊಂಡಿದ್ದವರನ್ನು ಪತ್ತೆ ಹಚ್ಚಿ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ತೀರ್ಮಾನಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 13 ಹೊಸ ಪ್ರಕರಣಗಳು ಪತ್ತೆಯಾಗಿರುವುದು ಅಲ್ಲಿನ ಜನರ ನಿದ್ದೆಗೆಡಿಸಿದೆ. ಬಾದಾಮಿಯಲ್ಲಿ 10 ವರ್ಷದ ಬಾಲಕ ಸೇರಿದಂತೆ 55 ವರ್ಷದವರೆಗಿನ 13 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಎಲ್ಲಾ ಸೋಂಕಿತರನ್ನು ಬಾಗಲಕೋಟೆಯ ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಎಲ್ಲಾ 13 ಮಂದಿ ಪಿ-607 ರೋಗಿಯೊಂದಿಗೆ ಸಂಪರ್ಕ ಹೊಂದಿದವರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಪಿ-654ರ ಜತೆ ಸಂಪರ್ಕವಿರಿಸಿಕೊಂಡಿದ್ದ 40 ವರ್ಷದ ಮಹಿಳೆ ಹಾಗೂ 25 ವರ್ಷದ ಯುವಕನಲ್ಲಿ ಪಾಸಿಟಿವ್ ಪತ್ತೆಯಾಗಿದೆ. ದಕ್ಷಿಣ ಕನ್ನಡದಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದು , 11 ವರ್ಷದ ಬಾಲಕಿ , 16 ವರ್ಷದ ಯುವತಿ ಹಾಗೂ 35 ವರ್ಷದ ಮಹಿಳೆಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ.
Laxmi News 24×7