ರಬಕವಿ-ಬನಹಟ್ಟಿ: ಒಂದೇ ಒಂದು ಎಕರೆ ಭೂ ಪ್ರದೇಶವನ್ನು ವೈಜ್ಞಾನಿಕವಾಗಿ ಬಳಸಿಕೊಂಡು ವರ್ಷದೂದ್ದಕ್ಕೂ ವೈವಿಧ್ಯಮಯವಾದ ಬೆಳೆಗಳನ್ನು ಬೆಳೆಯುತ್ತ ಲಕ್ಷಾಂತರ ರೂ. ಲಾಭ ಗಳಿಸುತ್ತಿರುವ ಸಮೀಪದ ಹೊಸೂರಿನ ರೈತ ಹನಮಂತ ಭುಜರುಕ ಚಿಕ್ಕ ಭೂಮಿಯನ್ನು ಹೊಂದಿದ ರೈತರಿಗೆ ಮಾದರಿಯಾಗಿದ್ದಾರೆ.
ಹನಮಂತ ತಮ್ಮ ಮಕ್ಕಳಾದ ಸಂಗಪ್ಪ ಮತ್ತು ಬಸವರಾಜರ ಜೊತೆಗೂಡಿ ಕಡಿಮೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಸಂಗಪ್ಪ ಬಿ.ಎ. ಪದವಿಧರ. ಬೇರೆ ಕಡೆಗೆ ನೌಕರಿಗೆ ಹೋಗದೆ ತಂದೆಗೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದಾರೆ.
ಸಂಗಪ್ಪ ಭುಜರುಕ ಪದವಿ ನಂತರ ತಮ್ಮನ್ನು ತಾವು ಒಕ್ಕಲುತನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಂಗಪ್ಪ ತಮ್ಮ ತಂದೆಯ ಒಂದು ಎಕರೆ ಭೂಮಿಯಲ್ಲಿ ಟೊಮೆಟೊ, ಸವತೆಕಾಯಿ, ಫ್ಲವರ್, ಚಂಡು ಹೂ, ಪುದಿನಾ ಸೇರಿದಂತೆ ಇನ್ನಿತರ ತರಕಾರಿ ಬೆಳೆಯುತ್ತಿದ್ದಾರೆ.
ಮಾರುಕಟ್ಟೆಯನ್ನು ಅಭ್ಯಾಸ ಮಾಡಿ ಯಾವ ಬೆಳೆಗಳನ್ನು ಬೆಳೆದರೆ ಲಾಭ ಗಳಿಸಬಹುದು ಎಂಬುದನ್ನು ಚಿಂತನೆ ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ದಸರೆ ಹಾಗೂ ದೀಪಾವಳಿಯಲ್ಲಿ ಅವರು ಬೆಳೆದ ಚಂಡೂ ಹೂ ಸಾಕಷ್ಟು ಲಾಭವನ್ನು ತಂದುಕೊಟ್ಟಿತು. ಒಂದು ಕೆ.ಜಿ.ಗೆ ರೂ. 40 ರಂತೆ ಮಾರಾಟವಾಗುತ್ತಿದ್ದ ಚಂಡೂ ಹೂ ದಸರೆ ಮತ್ತು ದೀಪಾವಳಿ ಸಂದರ್ಭದಲ್ಲಿ ರೂ. 200 ರವರೆಗೆ ಮಾರಾಟಗೊಂಡಿತು.
ಇನ್ನೂ ಸಂಗಪ್ಪ ಅವರ ಸವತೆಕಾಯಿಗಳನ್ನು ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ಬಹಳಷ್ಟು ರೈತರು ಸವತೆ ಬಳ್ಳಿಯನ್ನು ನೆಲಕ್ಕೆ ಹರಡುತ್ತಾರೆ. ಆದರೆ ಸಂಗಪ್ಪ ಸವತೆ ಬಳ್ಳಿಯನ್ನು ತಂತಿಗೆ ಎತ್ತರವಾಗಿ ಕಟ್ಟಿ ಮೇಲಕ್ಕೆ ಬೆಳೆಯುತ್ತಾರೆ. ಇದರಿಂದಾಗಿ ಸವತೆಕಾಯಿ ಉದ್ದವಾಗಿ, ಉತ್ತಮ ಬಣ್ಣದ ಮತ್ತು ಉತ್ತಮ ಗುಣಮಟ್ಟದಲ್ಲಿ ಬೆಳೆಯುತ್ತವೆ, ರೋಗವೂ ಕಡಿಮೆ ಬರುತ್ತದೆ ಎನ್ನುತ್ತಾರೆ. ಜೊತೆಗೆ ಉತ್ತಮ ಗುಣಮಟ್ಟದ ಟೊಮೊಟೊ, ಫ್ಲವರ್, ಕ್ಯಾಬೇಜ್ ಬೆಳೆಯುತ್ತಾರೆ.
ತಾವು ಬೆಳೆದ ಬೆಳೆಗಳನ್ನು ಮಧ್ಯಸ್ಥಗಾರರಿಗೆ ನೀಡದೆ ಖುದ್ದಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಬನಹಟ್ಟಿ, ರಬಕವಿ, ರಾಮಪುರ ಹಾಗೂ ಹೊಸೂರಿನಲ್ಲಿ ನಡೆಯುವ ಸಂತೆಯಲ್ಲಿ ತಾವೇ ಕುಳಿತುಕೊಂಡು ಮಾರಾಟ ಮಾಡುತ್ತಾರೆ. ಇದು ಕೂಡಾ ಅವರಿಗೆ ಸಾಕಷ್ಟು ಲಾಭದಾಯಕವಾಗಿದೆ. ದಿನನಿತ್ಯ ತರಕಾರಿ ಮಾರಾಟ ಮಾಡುತ್ತಿರುವುದರಿಂದ ನಿರಂತರವಾಗಿ ಪ್ರತಿವರ್ಷ ಲಕ್ಷಾಂತರ ಲಾಭ ಗಳಿಸುತ್ತಿದ್ದಾರೆ.
ಹತ್ತು ತಿಂಗಳ ಕಾಲ ತರಕಾರಿ ಬೆಳೆದ ನಂತರ ಎರಡು ತಿಂಗಳ ಕಾಲ ಭೂಮಿಯನ್ನು ಹದಗೊಳಿಸುತ್ತಾರೆ. ಸಮೀಪದ ಜಗದಾಳ ಗ್ರಾಮದ ಪ್ರವೀರಾಮ ಕೃಷಿ ಸಂಸ್ಥೆಯ ಸಲಹೆ ಸಹಕಾರದಿಂದ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಯುತ್ತಿದ್ದಾರೆ. ಇವುಗಳ ಜೊತೆಗೆ ತಮ್ಮ ತೋಟದ ಸುತ್ತಲೂ ೪೦ ಕ್ಕಿಂತ ಹೆಚ್ಚು ತೆಂಗಿನ ಗಿಡಗಳನ್ನು ಬೆಳೆಸಿದ್ದಾರೆ. ಇದರಿಂದ ಬರುವ ಎಳನೀರು ಕಾಯಿಗಳನ್ನು ಕೂಡಾ ಮಾರಾಟ ಮಾಡುತ್ತಾರೆ.
ವಾಣಿಜ್ಯ ಬೆಳೆಗಳ ಗೊಡವೆಗೆ ಹೋಗದೆ ಕೇವಲ ವರ್ಷ ಪೂರ್ತಿ ತರಕಾರಿ ಬೆಳೆದು ಲಾಭ ಮಾಡಿಕೊಳ್ಳುತ್ತಿರುವ ಹನಮಂತ ಮತ್ತು ಸಂಗಪ್ಪ ಭುಜರುಕ ಕೃಷಿಯಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.