ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ವಿವಾದ ದಿನದಿಂದ ದಿನಕ್ಕೆ ಭುಗಿಲೇಳುತ್ತಿದ್ದು, ಮರಾಠಿ ಭಾಷಿಕರ ಸಮಸ್ಯೆ ಕೇಳಲು ಮಹಾರಾಷ್ಟ್ರದ ಸಚಿವದ್ವಯರು ಹಾಗೂ ಗಡಿ ಸಲಹಾ ಸಮಿತಿ ಅಧ್ಯಕ್ಷರು ಡಿ.6ರಂದು ಬೆಳಗಾವಿಗೆ ಭೇಟಿ ನೀಡುತ್ತಿರುವುದರಿಂದ ಈಗಾಗಲೇ ಈ ಮೂವರಿಗೂ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಹಾ ಸಚಿವರ ಆಗಮನ ಖಂಡಿಸಿ ಕನ್ನಡ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ. ಕೆಲ ದಿನಗಳಿಂದ ಜಿಲ್ಲೆಯಲ್ಲಿ ಗಡಿ ವಿವಾದ ತಾರಕಕ್ಕೇರಿದ್ದು, ಮಹಾರಾಷ್ಟ್ರ ತನ್ನ ಮೊಂಡುವಾದ ಬಿಡುತ್ತಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. ಇಂಥ ಬಿಗುವಿನ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ ದೇಸಾಯಿ ಹಾಗೂ ಗಡಿ ಸಲಹಾ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಡಿ.6ರಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ.ಹೀಗಾಗಿ ಜಿಲ್ಲೆಯ ಗಡಿ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಿಆರ್‌ಪಿಸಿ 1973 ಕಲಂ 144(3)ರ ಅನ್ವಯ ಅಧಿಕಾರ ಬಳಸಿ ಜಿಲ್ಲಾಧಿಕಾರಿ ಡಾ|ನಿತೇಶ ಪಾಟೀಲ ಜಿಲ್ಲೆಯ ಗಡಿ ಪ್ರವೇಶಿಸದಂತೆ ಆದೇಶ ಹೊರಡಿಸಿದ್ದಾರೆ.
ಈ ಸಚಿವರು ಆಗಮನ ಹಿನ್ನೆಲೆ ಕಾನೂನು ಸುವ್ಯವಸ್ಥೆ ಹದಗೆಟ್ಟು, ಭಾಷಾ ವೈಷಮ್ಯ ಬೆಳೆದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ. ಮಹಾರಾಷ್ಟ್ರ ಸಚಿವರು ಡಿ.3ರಂದು ಬರುವ ದಿನಾಂಕವನ್ನು ಡಿ.6ಕ್ಕೆ ಮುಂದೂಡಿದ್ದಾರೆ. ಡಾ|ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ನಿಮಿತ್ತ ದಲಿತ ಸಂಘಟನೆಗಳ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ.
ಈ ಮೂವರೂ ಬೆಳಗಾವಿಗೆ ಬರುವುದು ಖಚಿತ ಆಗುತ್ತಿದ್ದಂತೆ ಕರವೇ ಕಾರ್ಯಕರ್ತರು ಡಿ.6ರಂದು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಆಗಮಿಸುತ್ತಿರುವುದನ್ನು ಖಂಡಿಸಿ ನಗರದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಕರ್ನಾಟಕ ಏಕೀಕರಣ ಸಮಿತಿ ಕಾರ್ಯಕರ್ತರು ರಾಜ್ಯಾಧ್ಯಕ್ಷ ರಮೇಶಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಎಂಇಎಸ್ ಹಾಗೂ ಮಹಾರಾಷ್ಟ್ರ ಸಚಿವರ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿಯ ನಾಡದ್ರೋಹಿ ಸಚಿವರಿಗೆ, ತಟಸ್ಥವಾಗಿ ನಿಂತಿರುವ ಬೆಳಗಾವಿ ಶಾಸಕರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ನಾವು ಯಾರಿಗೂ ಹೆದರಲ್ಲ: ಶಂಭುರಾಜ ಬೆಳಗಾವಿ ಪ್ರವಾಸ ವಿಷಯದಲ್ಲಿ ಸಿಎಂ ಏಕನಾಥ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್ ನೀಡುವ ಸೂಚನೆ ಪಾಲಿಸುತ್ತೇವೆ ಎಂದು ಮಹಾರಾಷ್ಟ್ರ ಶಂಭುರಾಜ ದೇಸಾಯಿ ಹೇಳಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿಗೆ ಬಾರದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿರುವ ಕುರಿತು ಸಿಎಂ ಹಾಗೂ ಡಿಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದುವರೆಗೆ ನಮ್ಮ ಪ್ರವಾಸವನ್ನು ಅ ಧಿಕೃತವಾಗಿ ರದ್ದುಗೊಳಿಸಿಲ್ಲ. ಉಭಯ ರಾಜ್ಯಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಾವು ಮುಂದೆ ಹೆಜ್ಜೆ ಇಡಲಿದ್ದೇವೆ. ನಾವು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆ ಬಗೆಹರಿಸಬೇಕು. ಗಡಿ ಭಾಗದ ಮರಾಠಿ ಭಾಷಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು 2020ರಿಂದ ಮಹಾ ವಿಕಾಸ ಅಘಾಡಿ ಸರ್ಕಾರ ಇದ್ದಾಗ ನಿಲ್ಲಿಸಲಾಗಿತ್ತು. ಈಗ ನಮ್ಮ ಆಡಳಿತ ಬಂದಾಗಿನಿಂದ ಈ ಸವಲತ್ತು ಕಲ್ಪಿಸಲಾಗುತ್ತಿದೆ. ನಮ್ಮ ತಾಕತ್ತು ಏನೆಂಬುದನ್ನು ನಾವು ಶಿವಸೇನೆ-ಬಿಜೆಪಿ ಸರ್ಕಾರ ರಚಿಸುವಾಗಲೇ ತೋರಿಸಿದ್ದೇವೆ ಎಂದು ಸಂಜಯ ರಾವುತ್‌ಗೆ ನೀಡಿದರು.