ರಾಮದುರ್ಗ: ಮಹಾರಾಷ್ಟ್ರದ ಸಚಿವದ್ವಯರು ಡಿ. 6ರಂದು ಬೆಳಗಾವಿಗೆ ಬರಲು ಸಜ್ಜಾಗಿರುವಂತೆಯೇ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾ ಸಚಿವರು ಗಡಿ ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಎರಡೂ ರಾಜ್ಯಗಳ ಮಧ್ಯೆ ವಿಷಮ ಪರಿಸ್ಥಿತಿ ಇದೆ. ಹೀಗಿರುವಾಗ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಯಾವುದೇ ಕಾರಣಕ್ಕೂ ಬರಬಾರದು ಎನ್ನುವ ಸಂದೇಶವನ್ನು ಈಗಾಗಲೇ ಕಳುಹಿಸಿದ್ದೇವೆ. ಹಿಂದೆ ಹಲವಾರು ಬಾರಿ ಈ ರೀತಿ ಪ್ರಯತ್ನ ಆದಾಗ ಕರ್ನಾಟಕ ಸರಕಾರ ಏನು ಕ್ರಮ ಕೈಗೊಂಡಿದೆಯೋ ಅದೇ ಕ್ರಮವನ್ನು ಈಗಲೂ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಾಮದುರ್ಗದಲ್ಲಿ ಸುದ್ದಿಗಾರರಿಗೆ ಸ್ಪಷ್ಟವಾಗಿ ಅವರು ತಿಳಿಸಿದರು.
ಜತ್ ತಾಲೂಕಿನ ಜನರಿಗೆ ನೀರು ಒದಗಿಸಲು ಮಹಾರಾಷ್ಟ್ರ ಸರಕಾರ ನೀರಾವರಿ ಯೋಜನೆಗೆ 2,000 ಕೋಟಿ ರೂ. ಘೋಷಣೆ ಮಾಡಿದೆ. ಕನ್ನಡಿಗರ ಸಹಿತ ಅಲ್ಲಿನ ಜನರು ಹಲವಾರು ವರ್ಷಗಳಿಂದ ಕುಡಿಯಲು ನೀರಿಲ್ಲದೆ ಬಳಲುತ್ತಿದ್ದರು. ಹೀಗಾಗಿ ಯೋಜನೆ ಮಾಡಿದ್ದಾಗಿ ಮಹಾರಾಷ್ಟ್ರ ನಾಯಕರು ಹೇಳಿದ್ದಾರೆ. ಆ ಭಾಗದ ಜನರಿಗೆ ನೀರು ಲಭಿಸುವುದು ಬಹಳ ಮುಖ್ಯ, ಅದು ಸಾಧ್ಯವಾಗಲಿ ಎಂದು ಬಯಸುತ್ತೇನೆ ಎಂದರು.