ವಿಜಯಪುರ: ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಗುರಿ ಮಾಡಿಲ್ಲ, ಅನಧಿಕೃತ ಮತದಾರರನ್ನು ಪಟ್ಟಿಯಿಂದ ರದ್ದು ಮಾಡಿದ್ದಾಗಿ ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ, ಚಿಲುಮೆ ಸಂಸ್ಥೆ ಬೆಂಗಳೂರಿನಲ್ಲಿ ಏನು ಮಾಡಿದೆ ಎಂದು ಗೊತ್ತಿಲ್ಲವೆ?
ಮತದಾರರ ಪರಿಷ್ಕರಣೆ ಹೆಸರಲ್ಲಿ ಅಕ್ರಮ ನಡೆದಿಲ್ಲ ಎಂದಾದರೆ ಐಎಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇಕೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಅಕ್ರಮವಾಗಿ ಮತದಾರರ ರದ್ದತಿ, ಸೇರ್ಪಡೆ ಕುರಿತು ಅನುಮಾನ ವ್ಯಕ್ತಪಡಿಸಿ ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರದ ಉಸ್ತುವಾರಿ ತಮ್ಮ ಕೈಯಲ್ಲೇ ಇರಿಸಿಕೊಂಡಾಗಲೂ ಚಿಲುಮೆ ಸಂಸ್ಥೆ ಮಾಡಿದ ಅಕ್ರಮ, ಇದಕ್ಕೆ ಕಾರಣವಾದ ಹಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ಅಕ್ರಮ ನಡೆದಿರದಿದ್ದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲು ಮುಂದಾಗಿದ್ದೇಕೆ? ಸರ್ಕಾರ ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ಬಯಲಾಗಿದ್ದು, ಅಕ್ರಮದ ಹೊಣೆಯನ್ನು ಬಿಬಿಎಂಪಿ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊರಬೇಕು ಎಂದು ಆಗ್ರಹಿಸಿದರು.