ಬಾಗಲಕೋಟೆ: ಇಳಕಲ್ ನಗರದಲ್ಲಿ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಆಯೋಜನೆಯಾಗಿದ್ದ ಸರ್ವಧರ್ಮ ಸೌಹಾರ್ದ ಭಾವೈಕ್ಯತೆ ಸಮಾವೇಶವನ್ನು ತಹಸೀಲ್ದಾರ್ ಬಸವರಾಜ ಮೇಳವಂಕಿ ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ.
ಸರ್ವಧರ್ಮ ಸೌಹಾರ್ದ ಭಾವೈಕ್ಯತಾ ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದಾರ್ಶನಿಕರ ಭಾವಚಿತ್ರವಿರುವ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ದಾರ್ಶನಿಕರ ಭಾವಚಿತ್ರದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇದರಿಂದ ಕಾನೂನು ಸುವ್ಯಸ್ಥೆಗೆ ದಕ್ಕೆ ಆಗಬಾರದೆಂದು ಮುಂಜಾಗರೂಕತೆಯಿಂದ ಮೆರವಣಿಗೆಯನ್ನು ಇಳಕಲ್ ತಹಸೀಲ್ದಾರ್ ರದ್ದು ಮಾಡಿದ್ದಾರೆ ಎನ್ನಲಾಗಿದೆ.
ಸರ್ವಧರ್ಮ ಸೌಹಾರ್ದ ಭಾವೈಕ್ಯತಾ ಸಮಾವೇಶ ಕಾರ್ಯಕ್ರಮ ರದ್ದು ವಿರೋಧಿಸಿ ಇಳಕಲ್ ನಗರದಲ್ಲಿ ತಾಲೂಕು ಆಡಳಿತದ ವಿರುದ್ದ ವಿವಿಧ ಸಮುದಾಯಗಳ ಜನರು ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸದ್ಯ ಪೊಲೀಸರು ಸರ್ವಧರ್ಮ ಸೌಹಾರ್ದ ಭಾವೈಕ್ಯತಾ ಸಮಾವೇಶದ ಸಂಘಟಕರನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ಕಂಠಿ ಸರ್ಕಲ್ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜಾಕ್ ತಟಗಾರ, ಮಹಾಂತೇಶ್ ನರಗುಂದ ಸೇರಿ ವಿವಿಧ ಸಮುದಾಯಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದ ಅಂಗಡಿ, ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದು, ಕಂಠಿ ಸರ್ಕಲ್ನಲ್ಲಿದ್ದ 25 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.