1949 ನವೆಂಬರ್ 26 ನಮ್ಮ ದೇಶದ ಸಂವಿಧಾನ ಅಂಗೀಕಾರವಾದ ದಿನ. ಹೀಗಾಗಿ ಇಂದು ದೇಶಾಧ್ಯಂತ ಸಂವಿಧಾನ ದಿನ ಆಚರಿಸಲಾಯ್ತು. ಅದೇ ರೀತಿ ಬೆಳಗಾವಿಯಲ್ಲಿಯೂ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಶನಿವಾರ ಬೆಳಗಾವಿಯ ಅಂಬೇಡ್ಕರ್ ಉದ್ಯಾನದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಸಂವಿಧಾನ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಬಳಿಕ ಸಂವಿಧಾನ ಪೀಠಿಕೆಯನ್ನು ಓದಲಾಯಿತು.
ನಂತರ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ ಅವರು ನಮ್ಮ ದೇಶಕ್ಕೆ ಮಹಾನ್ ಕೊಡುಗೆ ಕೊಟ್ಟ ಅಂಬೇಡ್ಕರ್ ಅವರ ಸಂವಿಧಾನ ದೇಶ ಅಷ್ಟೇ ಅಲ್ಲದೇ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದ ತಳಹದಿಯ ಮೇಲೆ ದೇಶ ಕಟ್ಟಲಾಗಿದೆ. ಅದರ ಮೇಲೆಯೇ ದೇಶವೂ ಬೆಳೆದು ಬಂದಿದೆ. ಈ ಸಂವಿಧಾನ ಸಮರ್ಪಣೆ ಕೇವಲ ಮಾಲೆ ಹಾಕಿ ಹೋಗುವುದಷ್ಟೇ ಅಲ್ಲ, ಸಂವಿಧಾನದ ಆಶಯಗಳನ್ನು ಅರಿತು ಎಲ್ಲರೂ ನಡೆಯಬೇಕು. ಮುಂದಿನ ವರ್ಷ ಇನ್ನು ಹೆಚ್ಚಿನ ವಿಜೃಂಭಣೆಯಿಂದ ಸಂವಿಧಾನ ದಿನ ಆಚರಿಸೋಣ ಎಂದರು.
ಈ ವೇಳೆ ಮುಖಂಡರಾದ ಮಲ್ಲೇಶ ಚೌಗುಲೆ, ಮಹಾದೇವ ತಳವಾರ, ವಿಠಲ ಬಂಗೋಡಿ, ಶಂಕರ ಢವಳಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.