ಗೋಕಾಕ್ ತಾಲೂಕಿನ ಘಟಪ್ರಭಾದ ಯುವಕನ ಕೊಲೆ ಕೇಸ್‍ಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ನವೆಂಬರ್ 13ರಂದು ರಾತ್ರಿ ಗೋಕಾಕ್ ನಗರದ ಶಿಂಗಳಾಪುರ ಸೇತುವೆಯಲ್ಲಿ ಘಟಪ್ರಭಾದ ಯುವಕ ಸೋಮಲಿಂಗ ಸುರೇಶ ಕಂಬಾರ ಎಂಬ 20 ವರ್ಷದ ಯುವಕನ ಶವ ಪತ್ತೆಯಾಗಿತ್ತು. ಕೈಕಾಲು ಕಟ್ಟಿ ಹಾಕಲಾಗಿತ್ತು. ಆತನ ದೇಹವನ್ನು ಹಳೆಯ ಲೈಟ್ ಕಂಬಕ್ಕೆ ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ನ.9ರಂದು ಕೊಲೆಯಾದ ಯುವಕನ ತಾಯಿ ಮಗ ಕಾಣೆಯಾಗಿದ್ದ ಕುರಿತು ಘಟಪ್ರಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆತನ ಶವ ಪತ್ತೆಯಾಗುತ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಗೋಕಾಕ್ ಡಿಎಸ್‍ಪಿ ಮನೋಜಕುಮಾರ್ ನಾಯಿಕ್ ನೇತೃತ್ವದ ತಂಡವು ಸಧ್ಯ ಈ ಕೊಲೆ ಕೇಸ್‍ನ್ನು ಭೇದಿಸಿದ್ದು, ಇಬ್ಬರು ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಕೊಲೆಯಾದ ಯುವಕನ ಸೋಮಲಿಂಗ ತಾಯಿ ಹೂವು-ಕಾಯಿ ವ್ಯಾಪಾರ ಮಾಡುತ್ತಿದ್ದರು. ಇವರಿಗೆ ಆರು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಇದರಲ್ಲಿ ಮೃತ ಸೋಮಲಿಂಗ ಐಟಿಐ ಮಾಡಿದ್ದು, ಮೊದಲು ಗೋವಾದಲ್ಲಿ ಕೆಲಸ ಮಾಡುತ್ತಿದ್ದ. ಆರು ತಿಂಗಳ ಹಿಂದೆಯಷ್ಟೇ ಹಿಂಡಲಗಾ ಬಳಿಯ ಫೈನಾನ್ಸ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನವೆಂಬರ್ 8ರಂದು ರಾತ್ರಿ 11 ಗಂಟೆ ಸುಮಾರಿಗೆ ಒಂದು ಫೋನ್ ಕರೆ ಮೇರೆಗೆ ಘಟಪ್ರಭಾಗೆ ಹೋದ ನಂತರ ಆತನ ಫೋನ್ ಸ್ವಿಚ್ಛ ಆಪ್ ಆಗಿತ್ತು. ಪ್ರಕರಣದ ತನಿಖೆ ನಡೆಸಿದ ಗೋಕಾಕ್ ಡಿಎಸ್‍ಪಿ ಮನೋಜ್‍ಕುಮಾರ್ ನೇತೃತ್ವದ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿಸಲಾಗಿದ್ದು. ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ.
ಮೃತ ವ್ಯಕ್ತಿ ಸೊಶಿಯಲ್ ಮಿಡಿಯಾದಲ್ಲಿ ಕೆಲ ತಿಂಗಳ ಹಿಂದೆ ಓರ್ವ ಯುವತಿಯ ಪರಿಚಯ ಆಗುತ್ತದೆ. ಪರಿಚಯ ಆದ ಬಳಿಕ ಆಕೆ ಜೊತೆ ಮೆಸೆಜ್, ವಿಡಿಯೋ ಕಾಲ್ ಮಾಡುತ್ತಿರುತ್ತಾನೆ. ಆದರೆ ಆ ಯುವತಿ ನಿಶ್ಚಿತಾರ್ಥ ಬೇರೆ ಹುಡುಗನ ಜೊತೆ ಆಗಿರುತ್ತದೆ. ಆದರೂ ಇಬ್ಬರೂ ಮೆಸೆಜ್ ಮಾಡುತ್ತಿರುತ್ತಾರೆ. ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗನಿಗೆ ಇದು ಗೊತ್ತಾಗಿ, ಹುಡುಗಿಯ ಮನೆಯವರಿಗೆ ತಿಳಿಸುತ್ತಾನೆ. ಬಳಿಕ ಹುಡುಗಿಯ ಫೋನ್‍ನಿಂದ ನ.8ರಂದು ರಾತ್ರಿ ಫೋನ್ ಮಾಡಿ ಘಟಪ್ರಭಾಗೆ ಕರೆಸಿಕೊಂಡು ಹುಡುಗಿಯ ಸಂಬಂಧಿಕರು ಮನೆಯಲ್ಲಿ ಕಟ್ಟಿ ಹಾಕುತ್ತಾರೆ. ಬಳಿಕ ದುರದುಂಡಿಯ ಫಾರ್ಮಹೌಸ್‍ಗೆ ಕರೆದುಕೊಂಡು ಹೋಗಿ ಒಂದು ವಾಯರ್‍ನಿಂದ ಕತ್ತು ಹಿಸುಕಿ ಸಾಯಿಸುತ್ತಾರೆ. ನಂತರ ಶಿಂಗಳಾಪುರ ಸೇತುವೆಯಲ್ಲಿ ಕೈ ಕಾಲು ಕಟ್ಟಿ ಶವವನ್ನು ಒಗೆಯುತ್ತಾರೆ.