Breaking News

ಪ್ರಕರಣದಿಂದ ಕೈಬಿಡಲು ಲಂಚ ವಿಜಯಪುರ ಠಾಣೆ ಕಾನ್‌ಸ್ಟೆಬಲ್‌ ಸೆರೆ

Spread the love

ವಿಜಯಪುರ (ಬೆಂ.ಗ್ರಾಮಾಂತರ): ವ್ಯಕ್ತಿಯೊಬ್ಬರ ಹೆಸರನ್ನು ಅಪರಾಧ ಪ್ರಕರಣದಿಂದ ಕೈಬಿಡಲು ₹ 30 ಸಾವಿರ ಲಂಚ ಪಡೆದ ಆರೋಪದ ಮೇಲೆ ಪಟ್ಟಣದ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಚಂದ್ರಶೇಖರ್‌ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

 

ಚಿಕ್ಕತತ್ತಮಂಗಲ ಗ್ರಾಮದ ಮಂಜುನಾಥ್ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ಕಾನ್‌ಸ್ಪೆಬಲ್‌ ಚಂದ್ರಶೇಖರ್‌ ಅವರನ್ನು ಲೋಕಾಯುಕ್ತ ಪೊಲೀಸರು ಹಣದ ಸಮೇತ ವಶಕ್ಕೆ ಪಡೆದರು.

ಮಂಡಿಬೆಲೆ ಗ್ರಾ.ಪಂ. ವ್ಯಾಪ್ತಿಯ ಚಿಕ್ಕತತ್ತಮಂಗಲದ ಮಂಜುನಾಥ್ ಮತ್ತು ಅವರ ಸಹೋದರಿ ನಡುವೆ ಹಣಕಾಸಿನ ವಿಚಾರವಾಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಜುನಾಥ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಬಂದು ಸೆಲ್‌ನಲ್ಲಿ ಕೂರಿಸಿದ್ದರು. ಠಾಣೆಯಿಂದ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಈರಮ್ಮ ಅವರು, ಕಾನ್‌ಸ್ಟೆಬಲ್‌ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪ್ರಕರಣ ಎದುರಿಸುತ್ತಿರುವ ಮಂಜುನಾಥ್‌, ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವಿಭಾಗಕ್ಕೆ ದೂರು ನೀಡಿದ್ದರು. ದೂರುದಾರರಿಂದ ಮೊದಲ ಕಂತಿನಲ್ಲಿ ₹ 30 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಚಂದ್ರಶೇಖರ್‌ ಅವರನ್ನು ಬಂಧಿಸಿದರು. ಈರಮ್ಮ ಅವರನ್ನೂ ವಶಕ್ಕೆ ಪಡೆದಿರುವ ತನಿಖಾ ತಂಡ, ಅವರ ಪಾತ್ರದ ಕುರಿತು ವಿಚಾರಣೆ ನಡೆಸುತ್ತಿದೆ.

ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌.ಪಿ ಶ್ರೀನಾಥ್‌ ಜೋಶಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ರೇಣುಕಾಪ್ರಸಾದ್‌ ಮತ್ತು ಇನ್‌ಸ್ಪೆಕ್ಟರ್‌ ಅಮರೇಶ್‌ ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

₹ 3 ಲಕ್ಷಕ್ಕೆ ಬೇಡಿಕೆ: ದೂರುದಾರ ಮಂಜುನಾಥ್ ಮಾತನಾಡಿ, ‘ಗಲಾಟೆ ಪ್ರಕರಣದಲ್ಲಿ ನನ್ನನ್ನು ಕರೆದುಕೊಂಡು ಬಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆವರೆಗೂ ಠಾಣೆಯ ಸೆಲ್‌ನಲ್ಲಿ ಕೂರಿಸಿದ್ದರು. ಹೊರಗೆ ಬಿಡಲು ₹ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ತಿಳಿಸಿದರು.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ