ಹಾಸನ: ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ, ತರಬೇತಿ ನೀಡಿ, ಸಂಘದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಅವರು ನಿನ್ನೆ ಬೇಲೂರು ತಾಲ್ಲೂಕಿನ ಚಿಲ್ಕೂರು ಶ್ರೀ ಮಠ ಪುಷ್ಪಗಿರಿ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಹಾಗೂ ಗುರು ಕರಿಬಸವೇಶ್ವರ ಅಜ್ಜಯ್ಯನವರ ಪಲ್ಲಕ್ಕಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ದುಡಿಮೆಗೆ ಅವಕಾಶ ದೊರೆತರೆ ರಾಜ್ಯದ ಜನತೆ ಶ್ರೀಮಂತರಾಗುತ್ತಾರೆ. ಪ್ರತಿ ದುಡಿಮೆಗೆ ನಾವು ಸಹಾಯ ಮಾಡುವ ಮೂಲಕ ರಾಜ್ಯವೂ ಅಭಿವೃದ್ಧಿಯಾಗುತ್ತದೆ. ಈ ಮೂಲ ತತ್ವದಿಂದ ಆಡಳಿತ ಸೂತ್ರವನ್ನು ನಡೆಸುತ್ತಿದ್ದೇವೆ. ರೈತರು, ರೈತರ ಸಂಘಗಳು ಸ್ವಾಮೀಜಿಗಳ ರಣಘಟ್ಟ ನೀರಾವರಿ ಹೋರಾಟದಲ್ಲಿ ಭಾಗಿಯಾಗಿದ್ದರು. ಜನರ ಹಿತದೃಷ್ಟಿಯಿಂದಲೇ ಕೈಗೊಂಡ ಹೋರಾಟದ ಸಂದರ್ಭದಲ್ಲಿ ಈ ಭಾಗದ ಬರ ನೀಗಿಸಲು ಈ ಕೆಲಸವನ್ನು ಒತ್ತಾಯ ಮಾಡಿ ಲಿಂಗೇಶ್ ಮಾಡಿಸಿದ್ದರು. .ರಣಘಟ್ಟ ಕೂಡ ಬಿಜೆಪಿ ಸರ್ಕಾರವಿದ್ದಾಗಲೇ ಅನುಮೋದನೆಗೊಂಡಿತು ಎಂದರು.