ದಾವಣಗೆರೆ: ಹರಿಹರದಲ್ಲಿ ಬುಧವಾರ ಮಧ್ಯಾಹ್ನ ನಡೆದ ಬಿಜೆಪಿ ಜನ ಜನಸಂಕಲ್ಪ ಯಾತ್ರೆಯ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಎಲ್ಲ ಟಿಕೆಟ್ ಆಕಾಂಕ್ಷಿಗಳನ್ನು ನಿಲ್ಲಿಸಿ, ಟಿಕೆಟ್ ಯಾರಿಗೆ ಕೊಟ್ಟರೂ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ಪ್ರಮಾಣ ವಚನ ಬೋಧಿಸಿ ಅಚ್ಚರಿ ಮೂಡಿಸಿದರು.
ಕಾರ್ಯಕ್ರಮದ ವೇದಿಕೆಗೆ ಗಣ್ಯರು ಬರುತ್ತಿದ್ದಂತೆ ಕಾರ್ಯಕರ್ತರ ಗುಂಪುಗಳು ತಮ್ಮ ಮುಖಂಡರ ಫೋಟೋ, ಬಾವುಟ ಹಿಡಿದು ಕೇಕೆ ಹಾಕುತ್ತಿದ್ದರು. ಇದನ್ನು ಕಂಡ ಮುಖ್ಯಮಂತ್ರಿ ಬೊಮ್ಮಾಯಿ, ಎಲ್ಲ ಕಾರ್ಯಕರ್ತರು ತಮ್ಮ ಮುಖಂಡರ ಫೋಟೋ, ಬಾವುಟ ಕೆಳಗಿಳಿಸಿ, ಕುಳಿತು ಕೊಳ್ಳಲು ಆದೇಶಿಸಿದರು.
ಆದರೂ ಕಾರ್ಯಕರ್ತರು ಮಾತು ಕೇಳದೇ ಇದ್ದಾಗ ಬಳಿಕ ಟಿಕೆಟ್ ಆಕಾಂಕ್ಷಿಗಳು ಯಾರೆಲ್ಲ ಇದ್ದೀರೋ ಅವೆಲ್ಲ ವೇದಿಕೆ ಎದುರು ಬನ್ನಿ ಎಂದು ಕರೆದರು. ಆಗ ಬಿ.ಪಿ. ಹರೀಶ್, ವಿರೇಶ ಹನಗವಾಡಿ, ಚಂದ್ರಶೇಖರ ಅವರು ಬಂದು ನಿಂತರು. ಆಗ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಮೂವರಿಗೂ ಪಕ್ಷದ ಗೆಲುವಿಗೆ ಶ್ರಮಿಸುವ ಪ್ರಮಾಣ ವಚನ ಬೋಧಿಸಿದರು.
ಆಗ ಎಲ್ಲ ಅಭಿಮಾನಿ ಕಾರ್ಯಕರ್ತರು ತಮ್ಮ ಮುಖಂಡರ ಫೋಟೋ, ಬಾವುಟ ಕೆಳಗಿರಿಸಿ, ಚಪ್ಪಾಳೆ ಮೂಲಕ ಸಿಎಂ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.