ಮೈಸೂರು: ಸರಕಾರಿ ಜಮೀನು, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರ ಮೇಲೆ ಯಾವುದೇ ಕಾರಣಕ್ಕೂ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು ಎಂದು ಕಂದಾಯ ಸಚಿವ ಆರ್. ಅಶೋಕ್ ಸೂಚಿಸಿದ್ದಾರೆ.
ಎಚ್.ಡಿ. ಕೋಟೆ ಭೀಮ ನಕೊಲ್ಲಿಯಲ್ಲಿ ನಡೆದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಸರಕಾರಿ ಜಮೀನು ಅಥವಾ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುವ ರೈತರನ್ನು ಭೂ ಕಬಳಿಕೆದಾರರು ಎಂಬಂತೆ ನೋಡಲಾಗುತ್ತಿತ್ತು. ಅವರ ಮೇಲೆ ಪ್ರಕರಣ ದಾಖಲಿಸುತ್ತಿದ್ದುದರಿಂದ ಜಾಮೀನಿಗಾಗಿ ಕೋರ್ಟ್‌ಗೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಅಂಥ ಸ್ಥಿತಿ ಇಲ್ಲ ಎಂದರು.
ಕೃಷಿ ಭೂಮಿಯಲ್ಲಿ ಕೋಳಿ ಫಾರ್ಮ್ ನಿರ್ಮಾಣಕ್ಕಾಗಿ ಭೂ ಪರಿವರ್ತನೆ ಮಾಡಲು ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಈಗ ಕೋಳಿ ಸಾಕಣಿಕೆಯನ್ನೂ ಕೃಷಿ ಎಂದೇ ಪರಿಗಣಿಸಲಾಗಿದೆ. ಹಾಗೆಯೇ ಜಮೀನು ಖಾತೆ ಮಾಡಲು 30 ದಿನ ಇದ್ದ ಅವಧಿಯನ್ನು ಇಳಿಸಿ ಏಳು ದಿನಗಳಿಗೆ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಂದಿ ಸರಕಾರದಿಂದ ಪಡೆದ ಭೂಮಿಯಲ್ಲಿ ಮನೆ ಕಟ್ಟಲು ಜಿಲ್ಲಾಧಿಕಾರಿಗಳ ಹಂತದಲ್ಲೇ ಅನುಮತಿ ಪಡೆಯುವಂತೆ ಮಾಡಲಾಗಿದೆ. ಆರು ತಿಂಗಳು ಇದ್ದ ಭೂ ಪರಿವರ್ತನೆ ಅವಧಿಯನ್ನು ಏಳು ದಿನಗಳಿಗೆ ಇಳಿಸಿದ್ದು, ರೈತರ ಕೆಲಸ ಶೀಘ್ರದಲ್ಲೇ ಆಗುವಂತೆ ಮಾಡಿದ್ದೇವೆ ಎಂದು ಅಶೋಕ್ ಹೇಳಿದರು.
ಕಾಡಂಚಿನ ಭಾಗದಲ್ಲಿ 52 ವರ್ಷದಿಂದ ಉಳುಮೆ ಮಾಡಿದವರಿಗೆ ಹಕ್ಕು ಪತ್ರ ನೀಡಿಲ್ಲ. ಬೆಂಗಳೂರಿನಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.