ಬೆಳಗಾವಿಯ ಮಂಗಾಯಿ ದೇವಸ್ಥಾನ ಬಳಿ ಇದ್ದ ರಸ್ತೆಯನ್ನು ಬಂದ್ ಮಾಡಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇದರಿಂದ ಜನ ಓಡಾಡಲು ಹರಸಾಹಸ ಪಡಬೇಕಾಗಿದೆ.
ಹೌದು ವಡಗಾವಿಯ ಮಂಗಾಯಿ ದೇವಸ್ಥಾನ ಬಳಿ ಇದ್ದ ಖಾಸಗಿ ಜಾಗದಲ್ಲಿಯೇ ಅನೇಕ ವರ್ಷಗಳಿಂದ ಇಲ್ಲಿನ ನಿವಾಸಿಗಳು ಓಡಾಡುತ್ತಿದ್ದರು. ಆದರೆ ಏಕಾಏಕಿ ಆ ಜಾಗದ ಮಾಲೀಕರು ರಸ್ತೆ ಬಂದ್ ಮಾಡಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಇದರಿಂದ ಜನ ದಿನನಿತ್ಯ ಓಡಾಡಲು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ ತಮಗೆ ರಸ್ತೆ ಮಾಡಿ ಕೊಡುವಂತೆ ಆಗ್ರಹಿಸಿ ಶನಿವಾರ ಡಿಸಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೇಖಾ ಲೋಕರಿ ಎಂಬುವವರು ಮಂಗಾಯಿ ಗುಡಿ ಹತ್ತಿರ ಒಂದು ರೋಡ್ ಇತ್ತು. ಅದನ್ನು ಬಂದ್ ಮಾಡಿ ಪೂಜಾರಿ ಅವರು ಒಂದು ಗೋಡೆ ಕಟ್ಟುತ್ತಿದ್ದಾರೆ. ಐದಾರು ಸಾವಿರ ಜನ ವಾಸವಿದ್ದೇವೆ. 30 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ನಮಗೆ ರೋಡ್ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಇಲ್ಲಿ ರಸ್ತೆ ಬಂದ್ ಮಾಡಿದ್ದರಿಂದ ಓಡಾಲು ಕಷ್ಟವಾಗಿ ಓರ್ವ ಮಹಿಳೆ ಬಿದ್ದು ಕೈ ಮುರಿದುಕೊಂಡಿರುವ ಘಟನೆ ಕೂಡ ನಡೆದಿದೆ. ಹೀಗೆ ಆದರೆ ನಾವು ಹೇಗೆ ಬದುಕಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು. ಓರ್ವ ವಿಕಲಚೇತನ ಮಾತನಾಡಿ ಕಂಪೌಂಡ್ ಕಟ್ಟುವ ಮೊದಲು ನಮ್ಮ ಮನೆಯವರೆಗೂ ತ್ರಿಚಕ್ರ ವಾಹನ ಹೋಗುತ್ತಿತ್ತು. ಈಗ ರಸ್ತೆ ಬಂದ್ ಆಗಿದ್ದರಿಂದ ಬೈಕ್ ಮನೆಯವರೆಗೂ ಹೋಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.