ಬೆಂಗಳೂರು: ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಹಾಗೂ ಶಿಸ್ತಿನ ದೃಷ್ಟಿಯಿಂದ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ರಾಜ್ಯಪಾಲರು ಥಾವರ್ ಚಂದ್ ಗೆಹಲೋತ್ ಹೇಳಿದರು.
ಸೋಮವಾರ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿಗೆ ತನ್ನ ಮನೆಯೇ ಶಿಕ್ಷಣ, ಸಂಸ್ಕೃತಿ ಹಾಗೂ ಇಡೀ ಜೀವನ ಸಾಮರ್ಥ್ಯದ ಅಡಿಪಾಯ.
ಆದ್ದರಿಂದ ಬಾಲ್ಯದಲ್ಲಿ ಹೇಳಿದ ಸ್ಪೂರ್ತಿದಾಯಕ ಕಥೆಗಳು, ಬೋಧನೆಗಳು ಮತ್ತು ಜ್ಞಾನವು ಮಗುವಿನ ಜೀವನದುದ್ದಕ್ಕೂ ಮಾರ್ಗದರ್ಶನ ನೀಡುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಇಂದಿನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಪೋಷಿಸಿದರೆ ನಾಳಿನ ಉತ್ತಮ ಮತ್ತು ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ನಾಂದಿಹಾಕಿದಂತಾಗುತ್ತದೆ. ಬಜೆಟ್‌ನಲ್ಲಿ ತಿಳಿಸಿದಂತೆ ಮುಂದಿನ ದಿನಗಳಲ್ಲಿ 4,266 ಅಂಗನವಾಡಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಸಂಸದ ಲೆಹರ್ ಸಿಂಗ್ ಸಿರೋಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಾ. ಕೆ.ಎನ್. ಅನುರಾಧಾ ಇತರರಿ ದ್ದರು.
ಹೊಯ್ಸಳ, ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು
ಧೈರ್ಯ ಸಾಹಸ ಪ್ರದರ್ಶನ, ಸಮಯ ಪ್ರಜ್ಞೆಯಿಂದ ಇತರರನ್ನು ಪ್ರಾಣಾಪಾಯದಿಂದ ರಕ್ಷಿಸಿದಂತಹ ಮಡಿಕೇರಿ ಜಿಲ್ಲೆಯ ನಮ್ರತಾ, ಶಿವಮೊಗ್ಗ ಜಿಲ್ಲೆಯ ಪ್ರಾರ್ಥನಾ, ಕಾರವಾರ ಜಿಲ್ಲೆಯ ಕೌಶಲ್ಯ ವೆಂಕಟರಮಣ, ದಾವಣಗೆರೆ ಜಿಲ್ಲೆಯ ಕೀರ್ತಿ ವಿವೇಕ್ ಎಂ. ಸಾಹುಕಾರ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾವ್ಯ ಭಾಸ್ಕರ್ ಹೆಗಡೆ ಅವರಿಗೆ 2022-23ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು 10 ಸಾವಿರ ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಹೊಂದಿದೆ.