ಬೆಂಗಳೂರು,ನ.9- ಸಾಮಾನ್ಯವಾಗಿ ಸಚಿವ ಸಂಪುಟ ಸೇರ್ಪಡೆಯಾಗಲು ಅನೇಕರು ತುದಿಗಾಲಲ್ಲಿ ನಿಂತಿರುತ್ತಾರೆ. ಇನ್ನು ಕೆಲವರು ತಮ್ಮ ತಮ್ಮ ಗಾಡ್ ಫಾದರ್ ಗಳ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕರೆದು ಕೊಡುತ್ತೇನೆ ಎಂದರೂ ಪ್ರಸ್ತುತ ಬಿಜೆಪಿಯಲ್ಲಿ ಸಚಿವ ಸ್ಥಾನ ಯಾರಿಗೂ ಬೇಡವಾಗಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಿನಿಂದಲೂ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಆಕಾಂಕ್ಷಿಗಳು ನಿರಂತರ ಒತ್ತಡ ಹೇರುತ್ತಲೇ ಬಂದಿದ್ದರು. ಹಲವಾರು ಕಾರಣಗಳಿಂದ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಬಂದಿದ್ದಾರೆ.
ಇದರಿಂದಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಹುತೇಕ ಆಕಾಂಕ್ಷೆಗಳಿಗೆ ಕರೆದು ಕೊಡುತ್ತೇನೆ ಎಂದರೂ ಸಹವಾಸವೇ ಬೇಡ ಎಂದು ಓಡಿ ಹೋಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಆರ್‍ಟಿನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರೊಬ್ಬರು ಕೆಲಸದ ನಿಮಿತ್ತ ಹೋಗಿದ್ದರು. ಈ ವೇಳೆ ಶಾಸಕರನ್ನು ನೋಡುತ್ತಲೇ ಬೊಮ್ಮಯಿ ಅವರು, ಸದ್ಯದಲ್ಲೇ ನಿನಗೆ ಸಿಹಿ ಸುದ್ದಿ ಸಿಗಲಿದೆ ಎಂದು ಹೇಳಿದರು.
ಈ ಮಾತನ್ನು ಕೇಳುತ್ತಿದ್ದಂತೆ ಶಾಸಕರು ಸಿಎಂಗೆ ಕೈ ಮುಗಿದು ನನಗೆ ಮಂತ್ರಿ ಗಿಂತ್ರಿ ಏನು ಬೇಡ. ನಾನು ನನ್ನ ಕ್ಷೇತ್ರ ಉಳಿಸಿಕೊಂಡರೆ ಸಾಕು ಎನ್ನುತ್ತಲೇ ಕಾಲಿಗೆ ಬುದ್ದಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಕ್ಷಣಕ್ಕೂ ಆ ಶಾಸಕರು ಸಿಎಂ ನಿವಾಸದ ಕಡೆ ಅಪ್ಪಿತಪ್ಪಿಯೂ ಸುಳಿದಿಲ್ಲ. ಇದು ಕೇವಲ ಒಬ್ಬ ಶಾಸಕರ ಕಥೆಯಲ್ಲ. ಬಹುತೇಕ ಎಲ್ಲಾ ಶಾಸಕರಿಗೆ ಸಚಿವ ಸ್ಥಾನ ಎಂದರೆ ಅಲರ್ಜಿಯಂತಾಗಿದೆ.
ಈಗ ರಾಜ್ಯ ಸರಕಾರದ ಅವಧಿ 5 ತಿಂಗಳಷ್ಟೇ ಇರುವಾಗ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ಮೊದಲು ಇದ್ದ ಆಸಕ್ತಿ ಇಲ್ಲವಾಗಿದೆ. ಸಚಿವ ಸ್ಥಾನಕ್ಕಾಗಿ ಇಷ್ಟು ದಿನ ನಾಯಕರ ಬೆನ್ನು ಬಿದ್ದಿದ್ದ ಬಹುತೇಕ ಶಾಸಕರು ಈಗ ಸಂಪುಟ ಸೇರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಚುನಾವಣೆ ಹತ್ತಿರ ಇದೆ. ಇಷ್ಟು ಕಡಿಮೆ ಅವಧಿಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂದಿಸಲು ಅವಕಾಶ ದೊರೆಯದೆ ಅದು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಲ್ಲದೆ ಶಾಸಕರಾಗಿ ಚುನಾವಣೆ ಎದುರಿಸಿದರೆ ಜನರ ಅನುಕಂಪ ಗಳಿಸಲು ಅನುಕೂಲವಾಗಲಿದೆ. ಸಚಿವರಾದರೆ ಪಕ್ಷವು ಚುನಾವಣೆಯ ಸಂದರ್ಭ ಹೆಚ್ಚಿನ ಜವಾಬ್ದಾರಿ ವಹಿಸುವುದರಿಂದ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಕೆಲವು ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ಮಾಡುವುದನ್ನೇ ಕೈ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಸ್ತುತ ಬೊಮ್ಮಾಯಿ ಸಂಪುಟದಲ್ಲಿ ಆರು ಸಚಿವ ಸ್ಥಾನಗಳು ಖಾಲಿ ಇದ್ದು, ವಿಧಾನಸಭೆ ಚುನಾವಣೆ ಯನ್ನು ಗಮನದಲ್ಲಿ ಇರಿಸಿಕೊಂಡು ಜಾತಿ ಮತ್ತು ಪ್ರಾದೇಶಿಕತೆಯ ಲೆಕ್ಕಾಚಾರದಲ್ಲಿ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ ಎನ್ನಲಾಗುತ್ತಿದೆ.