ಚಿತ್ರದುರ್ಗ, ನವೆಂಬರ್ 08: ”ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಎಂದು ಅರ್ಜಿ ಸಲ್ಲಿಕೆಯಾಗಿವೆ. ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದು, ವರದಿ ಬಂದ ನಂತರ ನಿರ್ಧರಿಸಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಜಿಲ್ಲೆಯ ಸಾಣೇಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ”ಆಡಳಿತಾಧಿಕಾರಿ ನೇಮಿಸುವ ಪೂರ್ವ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯಬೇಕಿದೆ. ಈ ಸಂಬಂಧ ಕಂದಾಯ ಇಲಾಖೆಯಿಂದ ವರದಿ ಸಲ್ಲಿಕೆಯಾದ ಬಳಿಕೆ ನೇಮಕ ಕುರಿತು ತೀರ್ಮಾನಿಸಲಾಗುವುದು” ಎಂದರು.
ಮುರುಘಾ ಮಠದ ಸ್ವಾಮೀಜಿಯವರ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ವ್ಯಾಖ್ಯಾನ ಮಾಡುವುದಿಲ್ಲ. ಆ ಬಗ್ಗೆ ನ್ಯಾಯಾಲಯ ನಿರ್ಧಾರ ಮಾಡುತ್ತದೆ ಎಂದು ಕೆಲವು ಪ್ರಶ್ನೆಗಳಿಗೆ ಬೊಮ್ಮಾಯಿ ಉತ್ತರಿಸಿದರು.
ನಂಬಿಕೆಗಳಿಗೆ ಕೊಡಲಿ ಏಟು ಕೊಡುವ ಕೆಲಸ
ಶಾಸಕ ಸತೀಶ್ ಜಾರಕಿಹೊಳಿಯವರ ಹೇಳಿಕೆ ವಿಚಾರ, ಶತಮಾನಗಳಿಂದ ಯಾವುದೇ ಧರ್ಮ ನಡೆಯುವುದು ನಂಬಿಕೆ, ವಿಶ್ವಾಸದ ಮೇಲೆ. ಸ್ಥಾಪಿತವಾಗಿರುವ ನಂಬಿಕೆಗಳಿಗೆ ಕೊಡಲಿ ಏಟು ಕೊಡುವ ಕೆಲಸ ಶಾಸಕ ಸತೀಶ್ ಜಾರಕಿಹೊಳಿ ಅವರು ಮಾಡಿದ್ದಾರೆ. ಅದರ ಮೇಲೆ ಚರ್ಚೆ ಮಾಡುವುದ ಏನಿದೆ. ತಾಂತ್ರಿಕವಾಗಿ ಅವರ ಶಾಲಾ, ಕಾಲೇಜುಗಳ ಪ್ರಮಾಣಪತ್ರದಲ್ಲಿ ಹಿಂದೂ ಎಂದೇ ನಮೂದಾಗಿದೆ. ನಂಬಿಕೆಗಳು ಶತಮಾನಗಳಿಂದ ಇದೆ. ಜನರ ನಂಬಿಕೆಯನ್ನು ಘಾಸಿ ಮಾಡುವಂಥ ಕೆಲಸ ಮಾಡಿ ಪುನ: ಚರ್ಚೆ ಮಾಡುವುದು ಏನೂ ಇಲ್ಲ. ಅವರ ಕ್ಷಮೇಯೂ ಬೇಕಾಗಿಲ್ಲ. ಎಲ್ಲವನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.