Breaking News

ಬೆಳಗಾವಿ: ಜಿಲ್ಲೆಯಲ್ಲಿ ತುಳಸಿ ಲಗ್ನದ ಸಂಭ್ರಮ

Spread the love

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ತುಳಸಿ ಲಗ್ನದ ಸಂಭ್ರಮ ಮನೆ ಮಾಡಿತು. ತುಳಸಿ ಕಟ್ಟೆಗಳನ್ನು ತೊಳೆದು ಸುಣ್ಣ- ಬಣ್ಣ ಬಳಿದ ಕುಟುಂಬದ ಸದಸ್ಯರು, ತುಳಸಿ ಸಸಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿದರು.

ವಾರದಿಂದಲೂ ಮಾರುಕಟ್ಟೆಯಲ್ಲಿ ತುಳಸಿಕಟ್ಟೆಗಳ ಮಾರಾಟ ಜೋರಾಗಿತ್ತು.

ಸಿಮೆಂಟ್‌ನಿಂದ ಮಾಡಿದ ಆಕರ್ಷಕ ಬಣ್ಣಗಳ ಕಟ್ಟೆಗಳನ್ನು ಮನೆ ಮುಂದೆ ಪ್ರತಿಷ್ಠಾಪಿಸಿದರು. ಶನಿವಾರ ಬೆಳಿಗ್ಗೆಯಂತೂ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿದವು. ತುಳಸಿ ಸಸಿಗಳು, ಕಬ್ಬಿನ ಜಲ್ಲೆ, ಬಾಳೆದಿಂಡು, ಜೋಳದ ದಂಟು, ಹೂ- ಹಣ್ಣು ಮಾರಾಟ ಭರ್ಜರಿಯಾಗಿ ನಡೆಯಿತು.

ತುಳಸಿ ಲಗ್ನಕ್ಕೆ ನೆಲ್ಲಿಕಾಯಿ ಪೋಣಿಸಿ ಹಾಕುವುದೇ ವಿಶೇಷ ಸಂಪ್ರದಾಯ. ಹೀಗಾಗಿ, ನೆಲ್ಲಿಕಾಯಿ ಹಾಗೂ ದಂಡೆಯ ಹೂವಿಗೆ ಎಲ್ಲಿಲ್ಲದ ಬೇಡಿಕೆ ಬಂತು.

ಸಂಜೆಯ ವೇಳೆಗೆ ಸಿದ್ಧತೆ ಮಾಡಿಕೊಂಡ ಗೃಹಿಣಿಯರು ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ, ಬಣ್ಣಬಣ್ಣದ ರಂಗವಲ್ಲಿ ಬಿಡಿಸಿದರು. ಯುವಕರು ವಿದ್ಯುದ್ದೀಪಾಲಂಕಾರ ಮಾಡಿರು. ಕಬ್ಬಿನ ಜಲ್ಲೆ, ಬಾಳೆದಿಂಡು ಕಟ್ಟಿ, ತುಳಸಿಕಟ್ಟೆಗೆ ಬಣ್ಣ ಬಳಿದು ತುಳಸಿಗಾಗಿ ಹಸೆಮಣೆ ಸಿದ್ಧಪಡಿಸಿದರು. ಇಳಿಸಂಜೆಗೆ ಸಾಲುದೀಪಗಳನ್ನು ಹಚ್ಚಿದ ಹೆಣ್ಣುಮಕ್ಕಳು, ಮನೆಯ ಎಲ್ಲ ಸದಸ್ಯರೊಂದಿಗೆ ಸೇರಿ ಲಗ್ನಕ್ಕೆ ಅಣಿಯಾದರು.

ತುಳಸಿಕಟ್ಟೆಗೆ ಚೆಂಡುಹೂವಿನ ದಂಡೆ ಮಾಡಿ ಕಟ್ಟಿ, ಮಲ್ಲಿಗೆ ಹೂವಿನ ಮಾಲೆ ಮಾಡಿ ಮುಡಿಸಿದರು. ಹಸಿರು ಬಳೆ, ಕಾಲುಂಗುರ ತೊಡಿಸಿದರು. ಮತ್ತೆ ಕೆಲವರು ಚಿನ್ನಾಭರಣವನ್ನೂ ತೊಡಿಸಿದರು. ತುಳಸಿ ಸಸಿಯನ್ನು ಮದುವಣಗಿತ್ತಿಯಂತೆ ಸಿಂಗರಿಸಿದರು. ಅಕ್ಕಪಕ್ಕದ ಮನೆಯ ಮಹಿಳೆಯರೆಲ್ಲ ಸೇರಿ ಸಸಿಗೆ ಅರಿಸಿನ- ಕರಿಮಣಿಯ ತಾಳಿ ಕಟ್ಟಿ, ಅಕ್ಷತೆ ಹಾಕಿ, ಆರತಿ ಎತ್ತಿದರು. ಮಂಗಳಗೀತೆಗಳನ್ನು ಹಾಡಿ ತಮಗೂ ನಿತ್ಯ ಸುಮಂಗಲಿ ಭಾಗ್ಯ ನೀಡುವಂತೆ ಪ್ರಾರ್ಥಿಸಿದರು.

ಕೆಲವರು ಇದಕ್ಕೂ ಮುನ್ನ ಅರ್ಚಕರನ್ನು ಕರೆದು ‘ಕೃಷ್ಣ- ತುಳಸಿ’ ಲಗ್ನದ ವಿಧಾನಗಳನ್ನು ಪೂರೈಸಿದರು. ಬಾಳೆಎಲೆ, ಚೆಂಡು ಹೂ, ಕೊಬ್ಬರಿ, ಅರಿಸಿನ, ಕುಂಕುಮ, ನೆಲ್ಲಿಕಾಯಿ, ಹುಣಸೆಕಾಯಿ, ಕಾಡಿಗೆ, ಬಾಚಣಿಗೆ, ಕನ್ನಡಕ ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿದ ಪೊಟ್ಟಣಗಳನ್ನು ತುಳಸಿ ಮುಂದೆ ಇಟ್ಟು ಪೂಜಿಸಿದರು.

ವೀಳ್ಯದೆಲೆ, ಅಡಿಕೆ, ಅರಿಸಿನ ಬೊಟ್ಟು, ಅಕ್ಕಿ, ಕೊಬ್ಬರಿಗುಂಡು, ಬಾದಾಮಿ, ಉತ್ತತ್ತಿ ಇರುವ ಪೊಟ್ಟಣಗಳನ್ನು ಮಾಡಿ, ಅಕ್ಕಪಕ್ಕದ ಹೆಣ್ಣುಮಕ್ಕಳನ್ನು ಕರೆದು ಉಡಿ ತುಂಬಿದರು. ನಂತರ ಮನೆ ಮಂದಿಯೆಲ್ಲ ಕುಳಿತು ಹಬ್ಬದ ವಿಶೇಷ ಖಾದ್ಯಗಳಾದ ಹೋಳಿಗೆ, ಕರಿಗಡಬು, ಭಜ್ಜಿ ಸವಿದರು.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ