Breaking News

ಮುದ್ದೇಬಿಹಾಳ: ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಂದ ದಾಂಧಲೆ, ಕಲ್ಲೆಸೆತ

Spread the love

ಮುದ್ದೇಬಿಹಾಳ: ಪ್ರತಿ ಟನ್ ಕಬ್ಬಿಗೆ ಎಫ್‌ಆರ್ಪಿ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಮುದ್ದೇಬಿಹಾಳ, ತಾಳಿಕೋಟೆ, ಬಸವನ ಬಾಗೇವಾಡಿ ತಾಲೂಕುಗಳ ಸಾವಿರಾರು ರೈತರು ಯರಗಲ್ಲ-ಮದರಿ ಬಳಿ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ, ಕಲ್ಲೆಸೆದು, ದಾಂಧಲೆ ನಡೆಸಿದ್ದಾರೆ.

 

ಅಪಾರ ಸಂಖ್ಯೆಯಲ್ಲಿದ್ದ ರೊಚ್ಚಿಗೆದ್ದಿದ್ದ ಕಬ್ಬು ಬೆಳೆಗಾರ ರೈತರನ್ನು ತಡೆಯಲು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಹರಸಾಹಸ ಪಟ್ಟರೂ ಪ್ರಯೋಜನ ಆಗಲಿಲ್ಲ. ಪೊಲೀಸರ ಕೋಟೆ ಭೇದಿಸಿ ಕಾರ್ಖಾನೆ ಒಳಗೆ ನುಗ್ಗಿದ ರೈತರು ನೇರವಾಗಿ ಕಬ್ಬು ನುರಿಸುವ ಘಟಕದ ಬಳಿ ಹೋಗಿ ಅದನ್ನು ಬಂದ್ ಮಾಡುವಂತೆ ಆಗ್ರಹಿಸಿದರು.

ಒಂದು ಹಂತದಲ್ಲಿ ಕಬ್ಬಿನ ಗಣಿಕೆ ಮತ್ತು ಕಲ್ಲುಗಳನ್ನು ಯಂತ್ರದ ಕೊಠಡಿಯತ್ತ ಎಸೆದಾಗ ಕೊಠಡಿಯ ಗಾಜುಗಳು ಪುಡಿಯಾದವು. ಕೆಲವು ರೈತರು ಕಬ್ಬು ಸಾಗಿಸುವ ಕ್ಯಾನಲಗೆ ಧುಮುಕಿ ಅಪಾಯ ಮೈಮೇಲೆಳೆದುಕೊಳ್ಳಲು ಯತ್ನಿಸಿದರು.

ರೈತರ ಆಕ್ರೋಶ ಅರಿತ ಸಿಬ್ಬಂದಿ ಕೂಡಲೇ ಕಬ್ಬು ನುರಿಸುವ ಯಂತ್ರ ಬಂದ್ ಮಾಡಿ ಸಂಭವನೀಯ ಅನಾಹುತ ತಪ್ಪಿಸಿದರು. ಕೆಲ ರೈತರು ಕಾರ್ಖಾನೆ ಆವರಣದಲ್ಲಿ ಬಿದ್ದಿದ್ದ ಕಲ್ಲುಗಳನ್ನು ಆಯ್ದು ಕಬ್ಬು ತುಂಬಿಕೊಂಡು ನಿಂತಿದ್ದ ವಾಹನ ಮತ್ತು ಕಾರ್ಖಾನೆಯ ಕಟ್ಟಡಗಳತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಡಿಎಸ್ಪಿ ಅರುಣ ಕುಮಾರ ಕೋಳೂರ, ಸಿಪಿಐ ಆನಂದ ವಾಘ್ಮೋಡೆ ನೇತೃತ್ವದಲ್ಲಿ ಮುದ್ದೇಬಿಹಾಳ, ತಾಳಿಕೋಟೆ ಮತ್ತು ಡಿಆರ್ ಪೊಲೀಸರು ಭದ್ರತೆ ಒದಗಿಸಲು ಹರಸಾಹಸ ಪಟ್ಟರು.

ಸರ್ಕಾರ ಟನ್ ಕಬ್ಬಿಗೆ 3,200 ರೂ. ದರ ನಿಗದಿ ಪಡಿಸಿದೆ. ಬಾಲಾಜಿಯವರು ಕಟಾವು ಮತ್ತು ಸಾಗಣೆ ವೆಚ್ಚ ಮುರಿದುಕೊಂಡು 2,502 ರೂ. ಕೊಡುತ್ತಿದ್ದು, 3,800 ರೂ. ಕೊಡಬೇಕು ಎನ್ನುವುದು ರೈತರ ಬೇಡಿಕೆ. ಆದರೆ ಎಫ್‌ಆರ್ಪಿ ದರ ನಿಗದಿ ಪಡಿಸುವುದು ಸರ್ಕಾರವೇ ಹೊರತು ಕಾರ್ಖಾನೆಯವರಲ್ಲ. ಈ ವಿಷಯದಲ್ಲಿ ನಾವು ಅಸಹಾಯಕರು ಎಂದು ಕಾರ್ಖಾನೆಯವರು ಹತಾಶೆ ವ್ಯಕ್ತಪಡಿಸುತ್ತಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ