ಬೆಂಗಳೂರು: ದೀಪಾವಳಿ ಹಬ್ಬದ ಸಾಲು ಸಾಲು ರಜೆಗಳಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡುವರಿಗೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳ ದರಕ್ಕೆ ಹೋಲಿಸಿದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ವಿಮಾನ ಪ್ರಯಾಣ ದರಕ್ಕಿಂತಲೂ ಬಸ್ ಪ್ರಯಾಣ ದರ ದುಬಾರಿಯಾಗಿದೆ.
ಹಬ್ಬ ಮತ್ತು ಸರ್ಕಾರಿ ರಜೆಗಳ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದರು. ಈ ಸಂಬಂಧ ಬಸ್ ಮಾಲೀಕರ ಸಭೆಗಳನ್ನೂ ನಡೆಸಿ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಇದ್ಯಾವುದಕ್ಕೂ ಕಿಮ್ಮತ್ತು ನೀಡದ ಖಾಸಗಿ ಬಸ್ ಆಪರೇಟರ್‌ಗಳು ಮನಸೋಇಚ್ಛೆ ಪ್ರಯಾಣ ದರ ಹೆಚ್ಚಳ ಮಾಡಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಬೆಳಗಾವಿಗೆ ಶನಿವಾರ ಪ್ರಯಾಣ ಮಾಡುವವರಿಗೆ ಗರಿಷ್ಠ ದರ ₹7,999 ಇತ್ತು. ಕನಿಷ್ಠ ದರ ₹3,500 ದರ ಇತ್ತು. ಮಂಗಳೂರಿಗೆ ಗರಿಷ್ಠ ದರ ₹3 ಸಾವಿರ, ಮೈಸೂರಿಗೆ ₹2 ಸಾವಿರ, ಬಾಗಲಕೋಟೆಗೆ ₹2,500, ಶಿವಮೊಗ್ಗಕ್ಕೆ ₹2,199, ದಾವಣಗೆರೆಗೆ ₹2199, ಶಿರಸಿಗೆ ₹2,250 ದರ ಇತ್ತು.
ಬೆಂಗಳೂರಿನಿಂದ ಮುಂಬೈಗೆ ಸ್ಲೀಪರ್ ಬಸ್‌ನಲ್ಲಿ ಮೇಲ್ಭಾಗದ (ಅಪ್ಪರ್) ಸೀಟುಗಳಿಗೆ ₹7,999 ಇದ್ದರೆ, ಕೆಳ ಭಾಗದ(ಲೋವರ್) ಸೀಟುಗಳಿಗೆ ₹9,999 ದರ ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಮುಂಬೈಗೆ ನೇರ ತೆರಳುವ ಬಸ್‌ಗಳಲ್ಲಿ ಹುಬ್ಬಳ್ಳಿ ಅಥವಾ ಬೆಳಗಾವಿಗೆ ಪ್ರಯಾಣಿಸುವ ಪ್ರಯಾಣಿಕರಿಂದಲೂ ಅಷ್ಟೇ ದರ ಪಡೆಯಲಾಗುತ್ತಿದೆ. ಈ ದರ ವಿಮಾನ ಪ್ರಯಾಣಕ್ಕಿಂತಲೂ ದುಬಾರಿ ಇದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಶನಿವಾರ ರಾತ್ರಿ ಹೊರಡುವ ವಿಮಾನಗಳಲ್ಲಿ ಪ್ರಯಾಣ ದರ ₹5,745 ಇತ್ತು. ಬಸ್ ಪ್ರಯಾಣ ದರ ಇದಕ್ಕಿಂತ ದುಬಾರಿ ಇರುವುದು ಪ್ರಯಾಣಿಕರನ್ನು ಕಂಗಾಲಾಗಿಸಿದೆ.
ಪರವಾನಗಿ ರದ್ದು: ಶ್ರೀರಾಮುಲು ಎಚ್ಚರಿಕೆ
ಬಳ್ಳಾರಿ: ‘ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಂದ ಹೆಚ್ಚು ದರ ವಸೂಲಿ ಮಾಡಿದರೆ ಅಂತಹ ಬಸ್‌ಗಳ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದರು.
Laxmi News 24×7